ಕಾರ್ತೀಕ ಸೋಮವಾರ: ಮಲೆ ಮಾದಪ್ಪನ ಸನ್ನಿಧಿಯಲ್ಲಿ ವಿಶಿಷ್ಟ ಹೂವಿನ ಅಲಂಕಾರ

ಸಂಜೆವಾಣಿ ವಾರ್ತೆ
ಹನೂರು: ನ.4:-
ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ತಿ.ನರಸೀಪುರದ ಸಮಾಜ ಸೇವಕ ಹಾಗೂ ಅನಾಥ ಶವ ಮುಕ್ತಿದಾತ ಡಾ. ಎಂ. ಮಾದೇಶ್ ರವರು ತಮ್ಮ ತಂದೆ ಶ್ರೀ ಕೆ. ಮಹದೇವಪ್ಪ ಅವರ ಸ್ಮರಣಾರ್ಥವಾಗಿ, ಎರಡನೇ ಕಾರ್ತೀಕ ಸೋಮವಾರ ದಂದು ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಭವ್ಯ ಹೂವಿನ ಅಲಂಕಾರ ಮಾಡಿಸಿದ್ದಾರೆ.

ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಸನ್ನಿಧಿ, ಚಪ್ಪರ ಮಾಳಿಗೆ, ಗಣೇಶನ ಗುಡಿ, ಹುಲಿವಾಹನ, ರುದ್ರಾಕ್ಷಿ ಮಂಟಪ, ಬಸವ ವಾಹನ, ದಾಸೋಹ ಭವನ ಮತ್ತು ಸಾಲೂರು ಮಠ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸುಮಾರು 850 ಕೆ.ಜಿ. ಹೂವುಗಳನ್ನು ಬಳಸಿ ಅಲಂಕಾರ ಮಾಡಲಾಯಿತು. ಈ ಅಲಂಕಾರವನ್ನು ಸುಮಾರು 20 ಮಂದಿ ನುರಿತ ಹೂಗಾರರು ನಿರ್ವಹಿಸಿದ್ದು, ಹೂವಿನ ಸೌಂದರ್ಯ ಭಕ್ತರ ಮನಸ್ಸು ಗೆದ್ದಿತು.
ನಂಜನಗೂಡು ತಾಲ್ಲೂಕಿನ ಆಲತ್ತೂರು ಹುಂಡಿಯ ಸಿದ್ದಪ್ಪನವರ ಕುಟುಂಬದಿಂದ ಭಕ್ತರಿಗೆ ದಾಸೋಹ ಸೇವೆಯ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ಸನ್ನಿಧಿಯಲ್ಲಿ ಅರ್ಚನೆ, ಅಭಿಷೇಕ ಹಾಗೂ ವಿಶೇಷ ಉತ್ಸವಗಳು ಸಾಲೂರು ಮಠದ ಶ್ರೀಗಳ ನೇತೃತ್ವದಲ್ಲಿ ಭಕ್ತಿಭಾವದಿಂದ ನೆರವೇರಿದವು.

ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಎರಡನೇ ಕಾರ್ತಿಕ ಸೋಮವಾರದ ವಿಶೇಷವಾಗಿ ಸಹಸ್ರಾರು ಭಕ್ತರು ಆಗಮಿಸಿ ಪೂಜಾ ಪುನಸ್ಕಾರ ಸಲ್ಲಿಸಿ ಹರಕೆ ಸೇವೆ ಸಲ್ಲಿಸಿ ಮಾದಪ್ಪನ ದರ್ಶನ ಪಡೆದಿದ್ದಾರೆ.

ಮಹದೇಶ್ವರ ಬೆಟ್ಟದಲ್ಲಿ ಎರಡನೇ ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಮಹದೇಶ್ವರ ಸ್ವಾಮಿಗೆ ವಿಶೇ ಪೂಜಾ ಕೈಂಕಾರ್ಯಗಳನ್ನು ನೇರವೇರಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ಮಹದೇಶ್ವರ ಸ್ವಾಮಿಯ ದರ್ಶನ ಪಡೆದು ಸ್ವಾಮಿಯ ಕೃಪೆಗೆ ಪಾತ್ರರಾದರು.

ಹರಕೆ ಹೊತ್ತ ಭಕ್ತರು ಮಲೆ ಮಾದಪ್ಪನ ಸನ್ನಿಧಿಯ ಸುತ್ತಲೂ ಉರುಳು ಸೇವೆ, ಪಂಜಿನ ಸೇವೆ ಸಲ್ಲಿಸಿ ಧೂಪ ಕರ್ಪೂರ ಹಚ್ಚಿ ಕೈಮುಗಿದು ಪ್ರಾರ್ಥಿಸಿದರು. ಜೊತೆಗೆ ಹುಲಿ ವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪ ವಾಹನ ವಿವಿಧ ಉತ್ಸವಗಳನ್ನು ನೇರವೇರಿಸಿದರು.

ಹೂವಿನ ಅಲಂಕಾರದಲ್ಲಿ ಭಾಗವಹಿಸಿದ ಹೂಗಾರರು ರಘು, ನಟೇಶ್, ಆನಂದ್, ಭದ್ರ, ರಾಜು, ಆಸಿಫ್, ಬಾಳೆಮಂಡಿ ಮಹೇಶ್, ಬಾಳೆಮಂಡಿ ಮದನ್, ನಾಗ, ಹರಿವತ್ಸ, ರಾಚು, ಬಾಲು, ಹಲಗೂರು ಅಕ್ಕಿಬಾಬು ಮತ್ತು ಚಂದನ್ ಅವರು ಮಹದೇಶ್ವರ ಸ್ವಾಮಿಯ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದರು.