
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ :ಡಿ.12 ಕಾರ್ತಿಕ ಮಾಸವನ್ನು ಭಾರತೀಯ ಸಾಂಪ್ರದಾಯಿಕ ಪರಂಪರೆಯಲ್ಲಿ ಹಾಗೂ ಪುರಾಣಗಳಲ್ಲಿ ವಿಶೇಷ ಸ್ಥಾನವಿದೆ. ಈ ಕಾರ್ತಿಕ ಮಾಸದಲ್ಲಿ ಬೆಳಕಿನ ಹಬ್ಬ ದೀಪೋತ್ಸವವನ್ನು ಆಚರಿಸುವುದು ಶತಮಾನಗಳಿಂದಲೂ ನಮ್ಮ ಸಂಸ್ಕೃತಿಯ ಭಾಗವಾಗಿದೆ. ದೀಪ ಬೆಳಗಿಸುವುದು ಕೇವಲ ಧಾರ್ಮಿಕ ಆಚರಣೆಯಲ್ಲ, ಅದು ಸಮಾನತೆ, ಶಾಂತಿ ಮತ್ತು ಮಾನವೀಯತೆಯ ಸಂದೇಶವನ್ನು ಸಾರುವ ಮಹತ್ವದ ಸಂಕೇತವೂ ಆಗಿದೆ ಎಂದು ಬಾಚಿಗೊಂಡನಹಳ್ಳಿ ತೋಂಟದಾರ್ಯ ಶಾಖಾ ಮಠದ ಶ್ರೀ ಶಿವ ಮಹಾಂತ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ತಾಲ್ಲೂಕಿನ ತಂಬ್ರಹಳ್ಳಿಯ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ಪಾಲ್ಗೊಂಡು ದೀಪೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೀಪ ಅಂದರೆ ಬೆಳಕು ಈ ಬೆಳಕು ಬಡವ ಶ್ರೀಮಂತ, ಭೇದಭಾವ, ದ್ವೇಷ, ಅಸಮಾನತೆ ಮತ್ತು ಅನ್ಯಾಯಗಳ ಕತ್ತಲನ್ನು ದೂರ ಮಾಡುವ ಶಕ್ತಿ ಹೊಂದಿದೆ. ಪ್ರತಿಯೊಬ್ಬರು ಮನೆ, ಮಠ, ದೇವಾಲಯ ಮತ್ತು ಬೀದಿಗಳಲ್ಲಿ ದೀಪ ಹಚ್ಚುವುದು ಸಮಾಜದಲ್ಲಿ ಎಲ್ಲರೂ ಸಮಾನರು ಎಂಬುದನ್ನು ಸೂಚಿಸುತ್ತದೆ. ಜಾತಿ, ಧರ್ಮ, ಬಡ–ಶ್ರೀಮಂತ, ಭಾಷೆ, ವರ್ಣ ಎನ್ನದೇ ಎಲ್ಲರಿಗೂ ದೀಪ ಬೆಳಕಿನಂತೆ ಪ್ರತಿ ಮನುಷ್ಯನೂ ಒಬ್ಬರಿಗೊಬ್ಬರು ಬೆಳಕು ನೀಡಬೇಕು ಎತ್ತರಕ್ಕೆ ಬೆಳೆಯಬೇಕು ಸಹಕಾರ ಮನೋಭಾವದಿಂದ ಜೀವಿಸಬೇಕೆಂದರು.
ಕಾರ್ತಿಕೋತ್ಸವ ನಿಮಿತ್ತ ಪ್ರತಿ ವರ್ಷದಂತೆ ಕೊಟ್ಟೂರೇಶ್ವರ ಸ್ವಾಮಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಈ ವರ್ಷ ವಿಶೇಷವಾಗಿ ಹೂವಿನ ಅಲಂಕಾರ ಮಾಡಿದ ಎಲ್ಲರ ಮೆಚ್ಚುಗೆ ಕಾರಣವಾಯಿತು. ಬಳಿಕ ನಡೆದ ಗಂಗೆಸ್ಥಳ ಮೆರವಣಿಗೆಯಲ್ಲಿ ಮಹಿಳೆಯರು ಕಳಸದೊಂದಿಗೆ ಪಾಲ್ಗೊಂಡಿದ್ದರು. ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಗಂಗೆಸ್ಥಳದಲ್ಲಿ ಪ್ರತಿಷ್ಟಾಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಪ್ರಮುಖ ಬೀದಿಗಳಲ್ಲಿ ಸಮಾಳ ನಂದಿಧ್ವಜ ಕುಣಿತ ಹಾಗೂ ವಾದ್ಯ ಮೇಳಗಳೊಂದಿಗೆ ವಿಜೃಂಭಣೆಯಿಂದ ನಢೆಯಿತು. ಬಳಿಕ ನಡೆದ ಹೂವಿನ ರಥೋತ್ಸವದಲ್ಲಿ ಸುತ್ತಮುತ್ತಲಿನ ಅನೇಕ ಹಳ್ಳಿಗಳಿಂದ ಸಾವಿರಾರು ಭಕ್ತರು ಆಗಮಿಸಿ ‘ಕೊಟ್ಟೂರೇಶ್ವರ ದೊರೆಯೇ ನಿನಗಾರು ಸರಿಯೇ. ಸರಿ ಎಂದವರ ಹಲ್ಲು ಮುರಿ’ ಎಂಬ ಜಯಘೋಷ ಕೂಗಿದರು. ರಥ ಚಲಿಸುತ್ತಿದ್ದಂತೆ ಯುವಕರು ವಿವಿಧ ಪಟಾಕಿ ಸಿಡಿಸಿದ್ದರಿಂದ ಬಾನಂಗಳದಲ್ಲಿ ಬಣ್ಣ ಬಣ್ಣದ ನಕ್ಷತ್ರದಂತೆ ಹೊಳೆಯುವ ಚಿತ್ತಾರಗಳು ಮೂಡಿ ನೋಡುಗರಿಗೆ ಹರ್ಷವುಂಟುಮಾಡಿತು.
ಈ ವೇಳೆ ಮುಖಂಡರಾದ ಅಕ್ಕಿ ಶಿವುಕುಮಾರ, ಜಿಪಂಮಾಜಿ ಸದಸ್ಯ ಅಕ್ಕಿ ತೋಟೇಶ್, ದೇವಸ್ಥಾನ ಟ್ರಸ್ಟ್ ನ.ಅಧ್ಯಕ್ಷ ಕೆ.ಎಚ್.ಎಂ ಕೊಟ್ರಯ್ಯ ಕಾರ್ಯದರ್ಶಿ ಡಿಎಂ.ತೋಟಯ್ಯ, ಗೌರವ ಅಧ್ಯಕ್ಷ ಗೌರಜ್ಜನವರ ಬಸವರಾಜ್, ಖಜಾಂಚಿ ಅಕ್ಕಿ ಪ್ರಸನ್ನ, ಎಸ್.ವಿ.ಪಾಟೀಲ್, ಆನೇಕಲ್ ಗುರುಬಸವರಾಜ್, ಪಿ.ಸುರೇಶ್,ಬಣಕಾರ್ ಕೊಟ್ರೇಶ್, ಮ್ಯಾಗಳಮನಿ ತೋಟಪ್ಪ, ಎಸ್.ಎಂ.ಶಿವಾನಂದಯ್ಯ, ಆರ್ಚಕ ತಿಪ್ಪಯ್ಯಸ್ವಾಮಿ ಇತರರು ಇದ್ದರು.


























