Home ಸುದ್ದಿ ರಾಷ್ಟ್ರೀಯ ಕಾರು ಅಪಘಾತ: ಉದ್ಯಮಿ ಪುತ್ರನ ಬಂಧನ

ಕಾರು ಅಪಘಾತ: ಉದ್ಯಮಿ ಪುತ್ರನ ಬಂಧನ

ಕಾನ್ಪುರ, ಫೆ.12:– ಲ್ಯಾಂಬೋರ್ಘಿನಿ ಕಾರು ಅಪಘಾತ ಪ್ರಕರಣದ ಪ್ರಮುಖ ಆರೋಪಿ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾನನ್ನು ಇಂದು ಬೆಳಿಗ್ಗೆ ಬಂಧಿಸಿ ವಿಚಾರಣೆ ನಡೆಸಿ ವೈದ್ಯಕೀಯ ತಪಾಸಣೆಯ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಕಾನ್ಪುರ ಪೆÇಲೀಸ್ ಮುಖ್ಯಸ್ಥ ರಘುಬೀರ್ ಲಾಲ್ ತಿಳಿಸಿದ್ದಾರೆ.


10 ಕೋಟಿ ರೂ.ಗೂ ಹೆಚ್ಚು ಬೆಲೆಯ ಇಟಾಲಿಯನ್ ಐಷಾರಾಮಿ ಸ್ಪೋಟ್ರ್ಸ್ ಕಾರು ಲ್ಯಾಂಬೋರ್ಘಿನಿ ರೆವೆಲ್ಟೊ, ನಿಯಂತ್ರಣ ತಪ್ಪಿ ಫೆ.7ರಂದು ಮಧ್ಯಾಹ್ನ ಕಾನ್ಪುರದ ವಿಐಪಿ ರಸ್ತೆಯಲ್ಲಿ ಪಾದಚಾರಿಗಳು ಮತ್ತು ವಾಹನಗಳಿಗೆ ಡಿಕ್ಕಿ ಹೊಡೆದ ನಾಲ್ಕು ದಿನಗಳ ನಂತರ ಮಿಶ್ರಾ ಅವರನ್ನು ಬಂಧಿಸಲಾಗಿದೆ.
ಲ್ಯಾಂಬೋರ್ಘಿನಿ ಕಾರು ಪಾದಚಾರಿಗಳು ಮತ್ತು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಶಿವಂ ಮಿಶ್ರಾ ಚಲಾಯಿಸುತ್ತಿದ್ದ ಐಷಾರಾಮಿ ಕಾರು ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ನಿಂತಿದ್ದ ಜನರು ಮತ್ತು ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಎಫ್‍ಐಆರ್ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ (ಕೇಂದ್ರ) ಅತುಲ್ ಕುಮಾರ್ ಶ್ರೀವಾಸ್ತವ ಹೇಳಿದ್ದಾರೆ.
ಕಾರು ಮೊದಲು ಆಟೋ ರಿಕ್ಷಾಕ್ಕೆ ನಂತರ ನಿಲ್ಲಿಸಿದ್ದ ರಾಯಲ್ ಎನ್‍ಫೀಲ್ಡ್ ಬೈಕ್‍ಗೆ ಡಿಕ್ಕಿ ಹೊಡೆದಿದ್ದರಿಂದ ಸವಾರ ಸುಮಾರು 10 ಅಡಿ ಎತ್ತರಕ್ಕೆ ಹಾರಿ ಕೆಳಗೆ ಬಿದ್ದಿದ್ದಾನೆ. ಕಾರು ಬೈಕ್ ಅನ್ನು ಸ್ವಲ್ಪ ದೂರ ಎಳೆದುಕೊಂಡು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.


ಗಾಯಾಳುಗಳಲ್ಲಿ ಒಬ್ಬರಾದ ಯಮುನಾಗಂಜ್ ನಿವಾಸಿ ತೌಫಿಕ್ ಎಂಬಾತನ ಕಾಲಿಗೆ ಗಂಭೀರ ಗಾಯಗಳಾಗಿವೆ ಎಂದು ಪೆÇಲೀಸರು ತಿಳಿಸಿದ್ದಾರೆ. ಇತರರಿಗೆ ಮೂಳೆ ಮುರಿತಗಳು ಮತ್ತು ಗಾಯಗಳಾಗಿವೆ. ಈ ಘಟನೆಯಿಂದ ಕೋಪಗೊಂಡ ಸ್ಥಳೀಯರು ಕಾರನ್ನು ಸುತ್ತುವರೆದು ಚಾಲಕನನ್ನು ಒಳಗೆ ಇರುವಂತೆ ಮಾಡಲು ಮುಂದಾಗಿದ್ದರು. ಈ ವೇಳೆ ಖಾಸಗಿ ಬೌನ್ಸರ್‍ಗಳು ಸ್ಥಳೀಯ ಜನರ ಗುಂಪನ್ನು ಹಿಂದಕ್ಕೆ ತಳ್ಳಲು ಪ್ರಯತ್ನಿಸಿದೆ ಮತ್ತು ಆಕ್ರಮಣಕಾರಿಯಾಗಿ ವರ್ತಿಸಿದೆ, ಇದರಿಂದ ಉದ್ವಿಗ್ನತೆ ಹೆಚ್ಚಾಯಿತು ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.
ಪೆÇಲೀಸರು ಸ್ಥಳಕ್ಕೆ ಧಾವಿಸಿ, ಚಾಲಕನನ್ನು ರಕ್ಷಿಸಿ ಗಾಯಾಳುಗಳ ಜೊತೆ ಖಾಸಗಿ ಆಸ್ಪತ್ರೆಗೆ ರವಾನಿಸಿದರು. ಅಪಘಾತಕ್ಕೀಡಾದ ಲಂಬೋರ್ಘಿನಿಯನ್ನು ವಶಪಡಿಸಿಕೊಂಡು ಪೆÇಲೀಸ್ ಠಾಣೆಗೆ ತೆಗೆದುಕೊಂಡು ಹೋಗಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.