ಕಾಯಕದಿಂದ ಕಾಯ ಶುಚಿ – ಹೆಚ್.ಎಂ.ಜ್ಯೋತಿ.

ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.20:  ಮಾನವನು ಕಾಯಾ, ವಾಚಾ, ಮನಸಾ ಶುದ್ಧನಾಗಿರಬೇಕೆಂದು ಶಾಸ್ತ್ರಗಳು ಸಾರುತ್ತವೆ. ಈ ಶುದ್ಧತೆಯನ್ನು ಹೇಗೆ ಸಾಧಿಸಬೇಕೆಂಬುದನ್ನು ಹಲವಾರು ರೀತಿಗಳಲ್ಲಿ ಹಲವಾರು ಶಾಸ್ತ್ರಗಳು ಹೇಳಿವೆ. ಆದರೆ ಶರಣರು ಸಾಧಿಸಿ ತೋರಿಸಿದಷ್ಟು ಸರಳವಾಗಿ ಯಾವ ಶಾಸ್ತ್ರವೂ ಹೇಳಿಲ್ಲವೆಂದು ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿಯರಾದ ಹೆಚ್.ಎಂ.ಜ್ಯೋತಿಯವರು ನುಡಿದರು.
ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಬ್ರೂಸ್‍ಪೇಟೆಯ ಸಕ್ಕರಿ ಕರಡೀಶ ಬಾಲಕಿಯರ (ರಾವ್ ಬಹದ್ದೂರ್  ಗುಬ್ಬಿ ತೋಟದಪ್ಪ ಧರ್ಮ ಸಂಸ್ಥೆಯ ಸಹಯೋಗ) ಉಚಿತ ವಸತಿ ಮತ್ತು ಪ್ರಸಾದ ನಿಲಯದಲ್ಲಿ ಏರ್ಪಡಿಸಿದ್ದ 314ನೇ ಮಹಾಮನೆ ಡಾ. ಜೆ.ಎಂ.ವೀರಭದ್ರಯ್ಯ ಸರ್ವ ಮಂಗಳಮ್ಮ ದತ್ತಿ ಮತ್ತು ಶ್ರೀಮತಿ ಕಮಲಮ್ಮ ಡಾ. ಬಸವನಗೌಡ ದತ್ತಿ, ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಕಾಯಕ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ, ಪೂಜೆ, ಜಪ, ತಪಾದಿಗಳಿಂದ ಸಾಧಿಸಲಾರದ ತ್ರಿಕರಣ ಶುದ್ಧಿಯನ್ನು ಕಾಯಕದಿಂದ ಕಾಯ ಶುದ್ಧಿ, ಮೃಧು ವಚನಗಳಿಂದ ವಾಕ್ ಶುದ್ಧಿ, ಸತ್ ಚಿಂತನೆಗಳಿಂದ ಮನೆ ಶುದ್ಧಿಯನ್ನು ಸಾಧಿಸಬಹುದೆಂಬುದನ್ನು ಶರಣರು ಸಾಧಿಸಿ ತೋರಿಸಿದರೆಂದು ಹೇಳಿದರು.
ಕಾಯಕವೇ ಕೈಲಾಸ ಸೂಕ್ತಿಯ ಜನಕ ಆಯ್ದಕ್ಕಿ ಮಾರಯ್ಯನಿಗೆ, ಕಾಯಕ ಜಾಗೃತಿಯನ್ನು ತಂದಾಕೆ ಆತನ ಪತ್ನಿ ಲಕ್ಕಮ್ಮನೆಂದು ಅಭಿಪ್ರಾಯ ಪಟ್ಟರು. ಜೆಸ್ಕಾಂನ ಪವರ್‍ಮ್ಯಾನ್ ಎ.ಕೆ.ಸುಂಕಪ್ಪನವರಿಗೆ ಕಾಯಕ ಶ್ರೇಷ್ಠ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಪ್ರಸಾದ ನಿಲಯ ಟ್ರಸ್ಟಿನ ಅಧ್ಯಕ್ಷರಾದ ಮೆಟ್ರಿ ಮೃತ್ಯುಂಜಯ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬಿಇ ವಿದ್ಯಾರ್ಥಿನಿ ಲಿಂಗ ಶ್ರೀ ವಚನ ಪ್ರಾರ್ಥನೆ ಸಲ್ಲಿಸಿದರು. ಕಾವೇರಿ ಸ್ವಾಗತ ಕೋರಿದರು. ವೇದಿಕೆ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ವಸತಿ ನಿಲಯದ ದಿನಚರಿಯನ್ನು ಸೌಮ್ಯ ನಿರೂಪಿಸಿದರು. ಪರಿಷತ್‍ನ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ಪ್ರಾಸ್ತಾವಿಕ ನುಡಿಗಳೊಂದಿಗೆ ದತ್ತಿ ಧಾತೃಗಳನ್ನು ಪರಿಚಯಿಸಿದರು. ಚೈತ್ರ  ಶರಣು ಸಮರ್ಪಣೆ ಮಾಡಿದರು. ಭಾವನ ಮತ್ತು ರಾಶಿ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಸುಂಕಪ್ಪನವರ ಮಿತ್ರರು, ಬಂಧು, ಬೆಳಗ, ನಿಲಯ ಪಾಲಕಿಯರಾದ ಶಿಲ್ಪ, ಸಂಡೂರು ತಾಲೂಕು ಕದಳಿ ಮಹಿಳಾ ವೇದಿಕೆ ಗೌರವಾಧ್ಯಕ್ಷರಾದ ಪ್ರೇಮಲೀಲಾ, ಪತಿ ಬಾದಾಮಿ ಬನಶಂಕರಿಯವರು ಉಪಸ್ಥಿತರಿದ್ದರು. ಮಹಾ ದಾಸೋಹದೊಂದಿಗೆ ಕಾರ್ಯಕ್ರಮ ಮಂಗಲವಾಯಿತು.