ಕಾಮಗಾರಿಗಳ ಗುಣಮಟ್ಟ ಕಾಪಾಡಿ: ಶಾಸಕ ಹೆಚ್.ಟಿ.ಮಂಜು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.18:
ತಾಲೂಕಿನ ಚಟ್ಟಂಗೆರೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಒಂದು ಕೋಟಿ ರೂ ವೆಚ್ಚದಲ್ಲಿ ನೂತನ ರಸ್ತೆ ಕಾಮಗಾರಿ, ರಾಜಘಟ್ಟ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಅರವತ್ತು ಲಕ್ಷ, ಕೆ.ಜಿ.ಕೋಡಿಹಳ್ಳಿ ಗ್ರಾಮದಲ್ಲಿ ಕೆ.ಆರ್.ಐ.ಡಿ.ಎಲ್ ಇಲಾಖೆ ವತಿಯಿಂದ ಇಪ್ಪತ್ತು ಲಕ್ಷ ರೂ ವೆಚ್ಚದಲ್ಲಿ ನೂತನ ರಸ್ತೆ ಕಾಮಗಾರಿಗೆ ಶಾಸಕ ಹೆಚ್.ಟಿ.ಮಂಜು ಭೂಮಿ ಪೂಜೆ ನೆರವೇರಿಸಿದರು.


ಬಳಿಕ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಅವರು ಗುತ್ತಿಗೆದಾರರು ಕಾಮಗಾರಿಗಳ ಗುಣಮಟ್ಟವನ್ನು ಕಾಪಾಡಿಕೊಂಡು ಉತ್ತಮ ಕೆಲಸ ನಿರ್ವಹಿಸಬೇಕು. ನಾನು ಗುಣಮಟ್ಟದಲ್ಲಿ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ. ಗ್ರಾಮಸ್ಥರು ಗುಣಮಟ್ಟದ ಕಾಮಗಾರಿ ನಡೆಯದೇ ಇದ್ದಲ್ಲಿ ತಕ್ಷಣ ಅದನ್ನು ವಿರೋಧಿಸಿ ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು. ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದರೆ ತಕ್ಷಣ ನನ್ನ ಗಮನಕ್ಕೆ ತಂದರೆ ಗುತ್ತಿಗೆದಾರರ ವಿರುದ್ಧ ಸೂಕ್ತ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಶಿಪಾರಸ್ಸು ಮಾಡಿ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ರಾಜ್ಯ ಸರ್ಕಾರವು ಶೇ.90ರಷ್ಟು ಅನುಧಾನವನ್ನು ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ವ್ಯಯ ಮಾಡುತ್ತಿದೆ. ಮೂಲಭೂತ ಸೌಲಭ್ಯಗಳಿಗೆ ಅಗತ್ಯ ಅನುಧಾನ ನೀಡುತ್ತಿಲ್ಲ. ಅಷ್ಟೋ ಇಷ್ಟೋ ನೀಡುತ್ತಿರುವ ಅನುಧಾನವನ್ನು ಹಂತ ಹಂತವಾಗಿ ತಾಲ್ಲೂಕಿನ ಗ್ರಾಮಗಳ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತಿದೆ. ಪ್ರಮುಖವಾಗಿ ರಸ್ತೆ ಅಭಿವೃದ್ದಿ, ವಸತಿ ಯೋಜನೆ, ನೀರಾವರಿ ಯೋಜನೆ, ಒಡೆದಿರುವ ಕೆರೆ ಕಟ್ಟೆಗಳ ಅಭಿವೃದ್ಧಿಗೆ ಅನುಧಾನ ನೀಡುವಂತೆ ಪದೇ ಪದೇ ಮನವಿ ಮಾಡಿದರೂ ಸಹ ರಾಜ್ಯ ಸರ್ಕಾರವು ನೀಡುತ್ತಿಲ್ಲ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಮುಖಂಡರಾದ ಅಜಯ್ ರಾಮೇಗೌಡ, ಬೇಲದಕೆರೆ ಮರೀಗೌಡ, ಕೃಷ್ಣೇಗೌಡ, ಶೀಳನೆರೆ ಪಿಡಿಓ ನವೀನ್‍ಕುಮಾರ್, ಶೀಳನೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ಸ್ವಾಮೀಗೌಡ, ಪುರಸಭಾ ಸದಸ್ಯ ಕೆ.ಕೆ.ರಮೇಶ್, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀನಿವಾಸ್, ಶಿಲ್ಪಶೇಖರ್, ದೇವರಾಜೇಗೌಡ, ಗಿರೀಶ್, ಕದರೇಗೌಡ, ಗುತ್ತಿಗೆದಾರರಾದ ಸ್ನೇಹಿತ ರಮೇಶ್, ರೇವಣ್ಣ, ಸ್ವಾಮೀಗೌಡ, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್,ಧ್ರುವಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.