ಕಾಡುಪ್ರಾಣಿಗಳ ಹಾವಳಿ ತಡೆಗೆ ಆಗ್ರಹಿಸಿ ರೈತರಿಂದ ಅರಣ್ಯ ಇಲಾಖೆಗೆ ಮುತ್ತಿಗೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಡಿ.09-
ತಾಲೂಕಿನ ಹೆಗ್ಗೋಠಾರ, ಕಲ್ಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ರೈತರ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದೇವೆ. ಇದನ್ನು ತಡೆಯಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಚಾ.ನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ರೈತರು ಕೆಲಕಾಲ ಪ್ರತಿಭಟನಾ ಧರಣಿ ನಡೆಸಿದರು. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.


ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಮಾತನಾಡಿ, ಚಾಮರಾಜನಗರ ತಾಲೂಕಿನ ಹೆಗ್ಗೋಪಾರ, ಕಲ್ಲುರ ವ್ಯಾಪ್ತಿಯಲ್ಲಿ ಹುಲಿ, ಚಿರತೆ ಹಾವಳಿ ಹೆಚ್ಚಾಗಿದೆ. ಕಳೆದ 2 ತಿಂಗಳಲ್ಲಿ 8-10 ಜಾನುವಾರುಗಳನ್ನು ಕೊಂದು ಹಾಕಿದ್ದು ನಾಲ್ವರನ್ನು ಬಲಿ ಪಡೆದುಕೊಂಡಿವೆ. ಆದರೆ, ಇಲ್ಲಿಯ ತನಕ ಹುಲಿ, ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಕ್ರಮ ವಹಿಸಿಲ್ಲ. ಈ ಸಂಬಂಧ ಪ್ರಶ್ನಿಸಿದರೆ ಬೋನು ಇಲ್ಲ. ಸಿಬ್ಬಂದಿ ಕೊರತೆ ಎಂದು ಸಬೂಬು ಹೇಳುತ್ತಾರೆ ಎಂದು ದೂರಿದರು.


ಪ್ರಮುಖವಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿಯೇ ಇಲ್ಲ. ಇದರಿಂದ ಯಾವುದೇ ಕೆಲಸಗಳು ಆಗುತ್ತಿಲ್ಲ. ಸರ್ಕಾರ ಕೂಡಲೇ ಅರಣ್ಯ ಸಿಬ್ಬಂದಿ ನೇಮಕ ಮಾಡಬೇಕು. ಜೊತೆಗೆ ಅಗತ್ಯವಿರುವ ಪರಿಕರಗಳನ್ನು ಪೂರೈಕೆ ಮಾಡಬೇಕು. ಆ ಮೂಲಕ ಜನ, ಜಾನುವಾರುಗಳನ್ನು ರಕ್ಷಣೆ ಮಾಡಬೇಕು. ಇಲ್ಲದಿದ್ದರೆ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಲಾಗುವುದು. ಜೊತೆಗೆ ಚಾ.ನಗರಕ್ಕೆ ಸಿಎಂ ಬಂದಾಗ ಕಪ್ಪು ಬಟ್ಟೆ ಪ್ರದರ್ಶಿಸಲಾಗುವುದು ಎಂದರು.


ಸಂಘದ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಶೇ. 50 ರಷ್ಟು ಅರಣ್ಯವಿದ್ದು ಕಾಡುಪ್ರಾಣಿಗಳಿಂದ ರೈತರು ಮೃತಪಟ್ಟಾಗ ಪರಿಹಾರದ ಚೆಕ್ ತೆಗೆದುಕೊಂಡು ಬರುವುದಲ್ಲ. ಬದಲಿಗೆ ಕಾಡುಪ್ರಾಣಿಗ¼ ಹಾವಳಿ ತಡೆಯಲು ಮುಂದಾಗಬೇಕು ಎಂದರು.


ಈ ಸಂಬಂಧ ಸಂಸದರು, ಶಾಸಕರು ಸೂಕ್ತ ಕ್ರಮವಹಿಸಬೇಕು. ಮುಂದಿನ ದಿನಗಳಲ್ಲಿ ಕಾಡುಪ್ರಾಣಿಗಳ ದಾಳಿ ನಡೆದರೆ ಸಂಸದರು, ಶಾಸಕರ ಮನೆಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಮೇಲಾಜಿಪುರ ಕುಮಾರ್, ಕಲ್ಪುರ ರಘು, ಮಹೇಶ್, ಮುರುಗೇಂದ್ರಸ್ವಾಮಿ, ಲೋಕೇಶ್ ಹಳೇಪುರ, ಮಹೇಶ್, ತಮ್ಮಯಪ್ಪ, ದೊರೆಸ್ವಾಮಿ, ಸಂಜಯ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.