
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಫೆ. 22 :- ಚಿಕ್ಕಮಗಳೂರು ಜಿಲ್ಲೆಯ ಹುಂಚೆಹಳ್ಳಿಪುರ ನಾಗೇಶಗೌಡ್ರು ಎಂಬುವವರ ಕಾಫಿ ಎಸ್ಟೇಟ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕೂಡ್ಲಿಗಿ ತಾಲೂಕಿನ ಮಹಿಳೆಯೋರ್ವಳ ಮೇಲೆ ಇಂದು ಬೆಳಿಗ್ಗೆ ಎಸ್ಟೇಟ್ ಬಳಿ ಕಾಡಾನೆಯೊಂದು ದಾಳಿ ನಡೆಸಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ.
ಕೂಡ್ಲಿಗಿ ತಾಲೂಕಿನ ಗೆದ್ದಲಗಟ್ಟೆ ಕಾಮಯ್ಯನಹಟ್ಟಿ ಗ್ರಾಮದ ಬಯ್ಯಪ್ಪರ ನಾಗರಾಜ ಅವರ ಪತ್ನಿ ಬೋರಮ್ಮ (41) ಕಾಡಾನೆ ದಾಳಿಗೆ ತುತ್ತಾದ ದುರ್ದೈವಿ ಕೂಲಿ ಕಾರ್ಮಿಕ ಮಹಿಳೆಯಾಗಿದ್ದಾಳೆ.ಇತ್ತೀಚಿಗೆ ಊರಿನಲ್ಲಿದ್ದ ಜಾತ್ರೆ ಮುಗಿಸಿಕೊಂಡು ಪ್ರತಿವರ್ಷ ಹೋದಂತೆ ಚಿಕ್ಕಮಗಳೂರು ಜಿಲ್ಲೆಯ ಕಡೆಯ ಕಾಫಿ ಎಸ್ಟೇಟ್ ನಲ್ಲಿ ದುಡಿಯಲು ವಲಸೆ ಹೋಗಿದ್ದರು ಎಂದಿನಂತೆ ದಿನಾಲೂ ಬೆಳಿಗ್ಗೆ ಎಸ್ಟೇಟ್ ಕಡೆ ಕೆಲಸಕ್ಕೆ ಅಲ್ಲಿರುವ ಕಾಲುದಾರಿಯಲ್ಲಿ ನಡೆದುಕೊಂಡು ಹೋಗಿ ಕೆಲಸದಲ್ಲಿ ತೊಡಗಿದ್ದ ಬೋರಮ್ಮನ ಮೇಲೆ ಕೊಬ್ಬಿದ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿ ತೀವ್ರ ಗಾಯಗೊಳಿಸಿದ್ದರಿಂದ ಆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಜರ್ಮಲಿ ಶಿವು, ಗೆದ್ದಲಗಟ್ಟೆ ಚಂದ್ರು ಎನ್ನುವವರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಾವನ್ನಪ್ಪಿರುವ ಮಹಿಳೆಗೆ ಪತಿ, ಇಬ್ಬರು ಗಂಡು ಮಕ್ಕಳು ಇದ್ದಾರೆ ಎಂದು ತಿಳಿದಿದ್ದು ಮಹಿಳೆಯ ಮೃತದೇಹವನ್ನು ಚಿಕ್ಕಮಗಳೂರು ಜಿಲ್ಲೆಯ ಹುಂಚೆಹಳ್ಳಿಪುರ ಗ್ರಾಮದಿಂದ ಕೂಡ್ಲಿಗಿ ತಾಲೂಕಿನ ಗೆದ್ದಲಗಟ್ಟೆ ಕಾಮಯ್ಯನಹಟ್ಟಿಗೆ ಇಂದು ತರಲಾಗುತ್ತದೆ ನಂತರ ಅಂತ್ಯಕ್ರಿಯೆ ಜರುಗಲಿದೆ ಎನ್ನುವ ಮಾಹಿತಿ ತಿಳಿದಿದೆ.






























