
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜ.14:– ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಬಡವರು ಹಾಗೂ ರೈತರನ್ನು ಶೋಷಣೆ ಮಾಡುತ್ತಿದೆ. ಬಹಳಷ್ಟು ಯೋಜನೆಗಳಿಗೆ ಅನುದಾನವನ್ನು ನೀಡದೆ, ರೈತರು ಅಭಿವೃದ್ದಿ ಕುಂಠಿತವಾಗುತ್ತಿದೆ. ಇದರ ವಿರುದ್ದ ಬಿಜೆಪಿ ರೈತ ಮೋರ್ಚಾದಿಂದ ಜನ ಜಾಗೃತಿ ಮೂಡಿಸುವ ಜೊತೆಗೆ ಸಂಘಟಿತವಾಗಿ ಹೋರಾಟ ಮಾಡೋಣ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬೇಡರಪುರ ಬಸವಣ್ಣ ತಿಳಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರೈತ ಮೋರ್ಚಾದ ನೂತನ ಪದಾಧಿಕಾರಿಗಳಿಗೆ ಅದೇಶ ಪ್ರತಿಯನ್ನು ನೀಡಿ, ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ರೈತ ಪರವಾದ ಯೋಜನೆಗಳನ್ನು ರೈತರಿಗೆ ಹೆಚ್ಚಿನ ಮಟ್ಟದಲ್ಲಿ ತಲುಪಿಸುವ ನಿಟ್ಟಿನಲ್ಲಿ ಕಾರ್ಯನ್ಮುಖರಾಗಬೇಕಾಗಿದೆ. ರೈತ ಸನ್ಮಾನ ಯೋಜನೆಯಲ್ಲಿ ಪ್ರತಿ ರೈತರಿಗೆ ಹಣ ನೇರವಾಗಿ ವರ್ಗಾವಣೆಯಾಗುತ್ತಿರುವ ಬಗ್ಗೆ ಆಯಾ ವ್ಯಾಪ್ತಿಯಲ್ಲಿ ಖಾತರಿ ಪಡಿಸಿಕೊಳ್ಳಿ, ಸಾವಯವ ಕೃಷಿಗೆ ಹೆಚ್ಚಿನ ಉತ್ತೇಜನ ಸೇರಿದಂತೆ ಬಹಳಷ್ಟು ಯೋಜನೆಗಳು ಕೇಂದ್ರದಲ್ಲಿ ಅನುಷ್ಠಾನವಾಗುತ್ತಿವೆ. ಇವುಗಳ ಫಲಾನುಭವಿಗಳನ್ನು ಅರ್ಜಿ ಹಾಕಿಸುವ ಜೊತೆಗೆ ಸವಲತ್ತು ಕಲ್ಪಿಸುವ ಕೆಲಸವನ್ನು ರೈತ ಮೋರ್ಚಾದ ಪದಾಧಿಕಾರಿಗಳು ನಮ್ಮ ವ್ಯಾಪ್ತಿಯಲ್ಲಿ ಮಾಡೋಣ ಎಂದರು.
ರೈತ ಮೋರ್ಚಾ ಪದಾಧಿಕಾರಿಗಳ ವಿವರ : ಬಿಜೆಪಿ ರೈತ ಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾಗಿ ಹೊನ್ನಹಳ್ಳಿ ಆರ್. ಪುರುಷೋತ್ತಮ್, ಕೊಮಾರನಪುರ ಚಂದ್ರಶೇಖರ್, ಉಪಾಧ್ಯಕ್ಷರಾಗಿ ಜ್ಯೋತಿಗೌಡನಪುರದ ಜಿ.ಪಿ. ದೊರೆಸ್ವಾಮಿ, ಉಡಿಗಾಲ ಚಂದ್ರಶೇಖರಪ್ಪ, ಯಾನಗಹಳ್ಳಿ ಎಂ. ಮಹದೇವಸ್ವಾಮಿ, ದೇವÀರಹÀಳ್ಳಿ ಎಲ್. ಮಹೇಶ್. ಶಾಗ್ಯ ಜಿ.ರಾಚಪ್ಪ ಅವರನ್ನು ನೇಮಕ ಮಾಡಿಕೊಳ್ಳಲಾಯಿತು.
ಕಾರ್ಯದರ್ಶಿಗಳಾಗಿ ಮರಿಯಾಲ ಮಹೇಶ್, ರಾಮಾಪುರ ಸಿ. ನವೀನ್, ಮಾದಾಪುರ ಎಂ. ಸಿ. ಪುಟ್ಟನಂಜಪ್ಪ, ಇಕ್ಕಡಹಳ್ಳಿ ಬಸವಣ್ಣ, ಅಟ್ಟುಗೂಲಿಪುರ ಮಹೇಶ್‍ಕುಮಾರ್ ಹಾಗೂ ಖಜಾಂಚಿಯಾಗಿ ಕಿಲಗೆರೆ ಡಿ. ಶ್ರೀಕಂಠಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಬಸವಣ್ಣ ತಿಳಿಸಿದರು.
ನೂತನ ಪದಾಧಿಕಾರಿಗಳು ಜಿಲ್ಲೆಯಲ್ಲಿ ಬಿಜೆಪಿ ರೈತ ಮೋರ್ಚಾವನ್ನು ಸಂಘಟನೆ ಮಾಡುವ ಮೂಲಕ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ, ರೈತ ಪರವಾದ ಕೆಲಸ ಕಾರ್ಯಗಳು ಹೆಚ್ಚು ನಡೆಯುವಂತೆ ಮಡಬೇಕು ಎಂದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೂರು ಮಹದೇವಸ್ವಾಮಿ, ರೈತ ಮೋರ್ಚಾ ಪ್ರಭಾರಿ ಶಿವಕುಮಾರ್ ಬೂದಿತಿಟ್ಟ್ಟು ಹಾಗು ಪದಾಧಿಕಾರಿಗಳು ಉಪಸ್ಥಿತರಿದ್ದರು.

























