ಸಂಜೆವಾಣಿ ವಾರ್ತೆ
ಚಾಮರಾಜನಗರ.ಅ.26:- ಕಾಂಗ್ರೆಸ್ ಪ್ರಚಾರ ಸಮಿತಿ ಚುನಾವಣೆಗೆ ಮಾತ್ರ ಸೀಮಿತವಾಗಿತ್ತು. ಇನ್ನು ಮುಂದೆ ವರ್ಷ ಪೂರ್ತಿ ಪ್ರಚಾರ ಸಮಿತಿಯನ್ನು ಸಕ್ರಿಯಗೊಳಿಸಿ, ಚುನಾವಣೆ ತಯಾರಿ ಮತ್ತು ಜನರಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ಸಂಯೋಜಕ ಎಸ್. ನಾರಾಯಣ್ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ, ಅ. 29 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಪ್ರಚಾರ ಸಮಿತಿಯ ಬೃಹತ್ ಸಭೆಗೆ ಜಿಲ್ಲೆಯಿಂದ ಎಲ್ಲಾ ಪದಾಧಿಕಾರಿಗಳು ಭಾಗವಹಿಸುವಂತೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ನೂತನವಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷನಾದ ಬಳಿಕ ಜಿಲ್ಲಾ ಪ್ರವಾಸ ಕ್ಕೆಗೊಂಡು ಜಿಲ್ಲಾ ಸಮಿತಿ ಅಧ್ಯಕ್ಷರು ಮತ್ತು ಪದಾಧಿ ಕಾರಿಗಳು ಪರಿಚಯಿಸಿಕೊಂಡು ಮುಂದಿನ ದಿನಗಳಲ್ಲಿ ಪ್ರಚಾರ ಸಮಿತಿ ವಿಭಾಗವನ್ನು ಸದೃಢಗೊಳಿಸಲು ಶ್ರಮಿಸುತ್ತಿರುವುದಾಗಿ ತಿಳಿಸಿದರು.
ಭಾರತದ ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಕಾಂಗ್ರೆಸ್ ಪಕ್ಷ ದೇಶಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹೆಚ್ಚು ಚರ್ಚೆಯಾಗಬೇಕು. ಕಾಂಗ್ರೆಸ್ ಪಕ್ಷವು ಜಾತ್ಯಾತೀತ ನಿಲುವು ಹೊಂದಿದ್ದು, ಸರ್ವರಿಗೂ ಸಮಬಾಳ್ವೆ ನೀಡುವ ಪರಿಕಲ್ಪನೆ ಹೊಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜಾರಿಮಾಡಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಮನೆ ಮನೆಗೆ ಹೋಗಿ ತಿಳಿಸಿ, ಮನೆಯಲ್ಲಿರುವ ಪ್ರತಿಯೊಬ್ಬರು ಕಾಂಗ್ರೆಸ್ 5 ಗ್ಯಾರಂಟಿಗಳ ಫಲಾನುಭವಿಗಳಾಗಿದ್ದಾರೆ.
ಈಗಲೂ ಸಹ ಗ್ರಾಮೀಣ ಭಾಗದವರಲ್ಲಿ ಇಂದಿರಾಗಾಂಧಿ ಪಿಂಚಿಣಿ ಬಂದಿದೆ ಎನ್ನುತ್ತಾರೆ. ಅಷ್ಟು ಶಕ್ತಿ ಕಾಂಗ್ರೆಸ್‍ಗೆ ಇದೆ. ಇದನ್ನು ಮತವಾಗಿ ಪರಿವರ್ತನೆ ಮಾಡಿದರೆ, ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳನ್ನು ಗೆಲುವ ಶಕ್ತಿ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಪ್ರಚಾರ ಸಮಿತಿ ಸಕ್ರಿಯವಾಗಿರುತ್ತದೆ ಎಂದು ನಾರಾಯಣ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಪ್ರಚಾರ ಸಮಿತಿಯ ಸಹಾಯಕ ಸಂಯೋಜಕ ರಘು ಮಾತನಾಡಿದರು. ಪ್ರಚಾರಸಮಿತಿಯ ಜಿಲ್ಲಾಧ್ಯಕ್ಷ ಹೊಸಹಳ್ಳಿ ಮಧುಸೂಧನ್, ಬ್ಲಾಕ್ ಅಧ್ಯಕ್ಷ ಮಹಮದ್ ಅಸ್ಗರ್, ಜಿಲ್ಲಾ ಗ್ಯಾರಂಟಿ ಯೋಜನೆ ಜಿಲ್ಲಾ ಅಧ್ಯಕ್ಷ ಹೊಂಗನೂರು ಚಂದ್ರು, ಅರಕಲವಾಡಿ ಗುರುಸ್ವಾಮಿ, ತೋಟೇಶ್, ಮುನಿರಾಜು, ರಾಜಶೇಖರ್, ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್, ಎಪಿಎಂಸಿ ಅಧ್ಯಕ್ಷ ಸೋಮೇಶ್, ತಾಲ್ಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ನಲ್ಲೂರು ಸೋಮೇಶ್ವರ, ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಯೋಗೇಂದ್ರ, ಓಬಿಸಿ ಜಿಲ್ಲಾಧ್ಯಕ್ಷ ಚೇತನ್ ಕುಮಾರ್, ಚೂಡಾ ಮಾಜಿ ಅಧ್ಯಕ್ಷ ಸುಹೇಲ್ ಅಲಿಖಾನ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ಕೆಂಗಾಕಿ, ಭಾಗ್ಯಮ್ಮ, ಕಾರ್ಮಿಕ ವಿಭಾಗದ ಎನ್. ಮಹೇಶ್, ಜಿ.ಪಂ. ಮಾಜಿ ಅಧ್ಯಕ್ಷರುಗಳಾದ ಸಿ.ಎ.ಮಹದೇವಶೆಟ್ಟಿ, ಕಾವೇರಿ ಶಿವಕುಮಾರ್ ಮೊದಲಾದವರು ಇದ್ದರು.




























