ಕಸಾಪ ರಾಜ್ಯಾಧ್ಯಕ್ಷ ಜೋಷಿ ವಿರುದ್ಧ ತನಿಖೆಯಾಗುವವರೆಗೆ ನಿರಂತರ ಹೋರಾಟ :ಪ್ರೊ. ಜಯಪ್ರಕಾಶ್‍ಗೌಡ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.24-
ಕನ್ನಡ ಸಾಹಿತ್ಯ ಪರಿಷತ್‍ನ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮಾಡಿದ್ದು, ಸರ್ಕಾರ ಕೂಡಲೇ ಅವರನ್ನು ಅಮಾನತ್ತುಪಡಿಸಿ, ಆಡಳಿತಾಧಿಕಾರಿ ನೇಮಕ ಮಾಡಿ ಅವರ ಅವಧಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆಯಾಗುವವರೆಗೆ ನಿರಂತರ ಹೋರಾಟ ನಡೆಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಕಾರ್ಯದರ್ಶಿ ಪ್ರೊ. ಜಯಪ್ರಕಾಶ್‍ಗೌಡ ತಿಳಿಸಿದರು.


ನಗರದ ಪ್ರವಾಸಿಮಂದಿರದಲ್ಲಿ ಕನ್ನಡ ನಾಡು ನುಡಿ ಜಾಗೃತಿ ಸಮಿತಿ ವತಿಯಿಂದ ಕಸಾಪ ವಿರುದ್ದ ಹೋರಾಟ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಧಿಕಾರಿಯಾಗಿದ್ದ ಮಹೇಶ್ ಜೋಷಿ ನಿವೃತ್ತಿಯಾಗುತ್ತಿದ್ದಂತೆ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಸ್ಥಾನದಲ್ಲಿ ಮೇಲೆ ಕಣ್ಣಿಟ್ಟು ವಾಮಮಾರ್ಗದ ಮೂಲಕ ಅಧ್ಯಕ್ಷರಾಗಿದ್ದಾರೆ. ನಂತರ ಅಧ್ಯಕ್ಷಗಿರಿಯನ್ನು ಕನ್ನಡ ಸಾಹಿತ್ಯ ಪರಿಷತ್‍ನ ಹಿತಾಸಕ್ತಿ ಹಾಗೂ ಸಾಹಿತ್ಯ, ಭಾಷೆ, ನಾಡು ನುಡಿ, ಜಲ ವಿಚಾರದಲ್ಲಿ ದುಡಿಯದೇ ಕೇವಲ ಹಣ ಮಾಡುವ ಕಾಯಕದಲ್ಲಿ ನಿರಂತರಾಗಿದ್ದಾರೆ. ಅಲ್ಲದೇ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿರುವ ಈಗಿರುವ ಬೈಲಾವನ್ನೇ ತಿದ್ದುಪಡಿ ಮಾಡಲು ಮುಂದಾಗಿದ್ದಾರೆ. ಇದನ್ನು ವಿರೋಧಿಸುವ ಸದಸ್ಯರು ಹಾಗೂ ಜಿಲ್ಲಾಧ್ಯಕ್ಷರನ್ನು ಬೆದರಿಸುವುದು, ಅಮಾನತ್ತು ಮಾಡುವ ಮೂಲಕ ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಿದ್ದಾರೆ ಎಂದು ದೂರಿದರು.


ಕಳೆದ 2 ವರ್ಷಗಳಿಂದ ಅವರ ಉಪಟಳ ಹೆಚ್ಚಾಗಿದ್ದು, ಸರ್ಕಾರ ಸಾಹಿತ್ಯ ಸಮ್ಮೇಳನಕ್ಕೆ ನೀಡುವ ಅನುದಾನಕ್ಕೆ ಲೆಕ್ಕವನ್ನೇ ನೀಡುತ್ತಿಲ್ಲ. ಈಗಾಗಲೇ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದೊಡ್ಡ ಹಗರಣವೇ ಆಗಿದೆ. ಈ ಬಗ್ಗೆ ಅಡಿಟ್ ವರದಿಯೂ ಸಹ ಉಲ್ಲೇಖವಾಗಿದೆ. ಈ ಅವ್ಯವಹಾರವನ್ನು ಮುಚ್ಚಿಕೊಳ್ಳಲು ತನಗೆ ನಿಷ್ಟರಾಗಿರುವ 30 ಮಂದಿಯನ್ನು ಪರಿಷತ್‍ಗೆ ನಾಮನಿರ್ದೇಶನ ಮಾಡಿಕೊಳ್ಳುವ ಮೂಲಕ ಅಕ್ರಮ ಮಾಡುತ್ತಿದ್ದಾರೆ. ವಿವಿಧ ವಲಯದಲ್ಲಿರುವ ಐದಾರು ಮಂದಿಯನ್ನು ನಾಮ ನಿರ್ದೇಶನ ಮಾಡಿಕೊಳ್ಳಲು ಬೈಲಾದಲ್ಲಿ ಅವಕಾಶ ಇದೆ. ಅದರೆ, ಈ ಜೋಷಿ ಇವೆಲ್ಲನ್ನು ಗಾಳಿಗೆ ತೂರಿ ತಮ್ಮಗೆ ಇಷ್ಟಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಇದರ ವಿರುದ್ದ ಈಗಾಗಲೇ ಮಂಡ್ಯ, ಮೈಸೂರು, ಬೆಂಗಳೂರು ಜಿಲ್ಲೆಗಳಲ್ಲಿ ಸಂಘಟಿತ ಹೋರಾಟ ನಡೆಯುತ್ತಿದೆ. ಈಗ ಗಡಿ ಜಿಲ್ಲೆಯಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಸಭೆ ಕರೆಯಲಾಗಿದೆ. ಇದರ ಬಗ್ಗೆ ನಿಮ್ಮೆಲ್ಲರ ಅಭಿಪ್ರಾಯದಂತೆ ಚಾಮರಾಜನಗರ ಜಿಲ್ಲೆಯಿಂದಲೂ ಸಹ ಕನ್ನಡ ಸಾಹಿತ್ಯ ಪರಿಷತ್‍ನ ದುರಾಡಳಿತ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ನಿಷ್ಕ್ರೀಯತೆ ವಿರುದ್ದ ಹೋರಾಟ ಮಾಡೋಣ ಎಂದು ಜಯಪ್ರಕಾಶ್‍ಗೌಡ ತಿಳಿಸಿದರು.


ವಿಧಾನ ಪರಿಷತ್‍ನ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಕನ್ನಡಿಗರ ಹಿತಾಸಕ್ತಿ ಮರೆತು ತನ್ನಗೆ ಇಷ್ಟಬಂದಂತೆ ಬೈಲಾ ತಿದ್ದುಪಡಿ ಮಾಡಿ ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಿದ್ದಾರೆ. ಕಸಾಪದ 110 ವರ್ಷದ ಇತಿಹಾಸದಲ್ಲಿಯೇ ಇಂಥ ಅಧ್ಯಕ್ಷರನ್ನು ನೋಡಿಲ್ಲ. ಕನ್ನಡಿಗರ ಹಿತಾಸಕ್ತಿಯನ್ನು ಮರೆತು, ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಕನ್ನಡದ ಕೆಲಸ ಮಾಡಲು ಇಂತಿಷ್ಟು ಹಣ ಪಡಯುವ ವಿದೇಶ ಪ್ರವಾಸಕ್ಕೂ ಕಸಾಪ ಹಣವನ್ನು ಪಡೆದುಕೊಂಡಿರುವ ಅಧ್ಯಕ್ಷ ಯಾರು ಎಂದರೆ ಮಹೇಶ್ ಜೋಷಿ ಎಂದು ಗುಡುಗಿದರು.


ಇಂಥ ಸರ್ವಾಧಿಕಾರಿ ಧೋರಣೆಯನ್ನು ಹೊಂದಿರುವ ಅಧ್ಯಕ್ಷರ ವಿರುದ್ದ ರಾಜ್ಯಾದ್ಯಂತ ಪ್ರತಿಭಟನೆಗಳು ಹಾಗೂ ಆಕ್ರೋಶ ಹೆಚ್ಚಾದರೆ ಸರ್ಕಾರ ಗಂರ್ಭೀರವಾಗಿ ಪರಿಗಣಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಜೋಷಿ ತೊಲಗಲಿ, ಕಸಾಪ ಉಳಿಯಲಿ ಅಭಿಯಾನ ಆರಂಭವಾಗಿದೆ. ಗಡಿ ಜಿಲ್ಲೆಯಲ್ಲಿಯು ಸಹ ಇವರ ವಿರುದ್ದ ಕೂಗು ಬರಬೇಕು. ಹೀಗಾಗಿ ಪೂರ್ವಭಾವಿ ಸಭೆ ಮಹತ್ವವನ್ನು ಪಡೆದುಕೊಂಡಿದೆ. ಸಮಾನ ಮನಸ್ಕರು ತೀರ್ಮಾನ ಮಾಡಿ ಒಮ್ಮತದ ಅಭಿಪ್ರಾಯವನ್ನು ತಿಳಿಸಿ ಎಂದರು.


ಜೂ. 10 ರಂದು ಪ್ರತಿಭಟನೆ : ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ, ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ವಿರುದ್ದ ಹೋರಾಟ ಮಾಡಲು ಜೂ. 10 ರ ಮಂಗಳವಾರ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಯನ್ನು ನಡೆಸಲು ತೀರ್ಮಾನಿಸಿದರು.


ಕಸಾಪ ಮಾಜಿ ಅಧ್ಯಕ್ಷ ಎ.ಎಂ. ನಾಗಮಲ್ಲಪ್ಪ, ದಲಿತ ಮಹಾಸಭಾದ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು), ಕೆ. ವೀರಭದ್ರಸ್ವಾಮಿ ಮಾತನಾಡಿ, ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ವಿರುದ್ದ ಬಹ¼ಷ್ಟು ಅಸಮಾಧಾನ ವ್ಯಕ್ತವಾಗುತ್ತಿದೆ. ಇಂಥವರು ಪರಿಷತ್‍ನಲ್ಲಿ ಮುಂದುವರಿಯಲು ಅರ್ಹರಲ್ಲ. ಅಲ್ಲದೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಷ್ಕ್ರೀಯವಾಗಿದ್ದು, ಇದರ ವಿರುದ್ದ ಒಗ್ಗಟ್ಟಿನ ಹೋರಾಟ ಅನಿರ್ವಾಯವಾಗಿದೆ ಎಂದರು.


ಕಸಾಪ ತಾಲೂಕು ಉಪಾಧ್ಯಕ್ಷ ಮಾದಾಪುರ ರವಿಕುಮಾರ್ ಮಾತನಾಡಿ, ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ವಿರುದ್ಧ ರಾಜ್ಯಾದ್ಯಂತ ಹೋರಾಟ ಹೆಚ್ಚಾಗುತ್ತಿದೆ. ಚಾ.ನಗರ ಗಡಿ ಜಿಲ್ಲೆಯಿಂದಲೇ ಇದಕ್ಕೆ ಧ್ವನಿಯಾಗಬೇಕೆಂಬ ಉದ್ದೇಶದಿಂದ ಪೂರ್ವಭಾವಿ ಸಭೆಯನ್ನು ಆಯೋಜನೆ ಮಾಡಿದ್ದು, ಗಡಿ ಜಿಲ್ಲೆ ಚಾಮರಾಜನಗರ ನಾಡು, ನುಡಿ, ಜಲ ವಿಚಾರದಲ್ಲಿ ಸದಾ ಮುಂಚೂಣಿಯಲ್ಲಿದೆ. ಚುನಾವಣೆ ಸಂದರ್ಭದಲ್ಲಿ ಅತ್ಯಂತ ನಯ ವಿನಯತೆಯನ್ನು ಪ್ರದರ್ಶನ ಮಾಡಿದ ಜೋಷಿ ಅಧಿಕಾರಕ್ಕೆ ಬರುತ್ತಿದ್ದಂತೆ ತಮ್ಮ ಇನ್ನೊಂದು ಮುಖವನ್ನು ತೋರಿಸಿದ್ದಾರೆ. ಅವರಿಗೆ ಅಧಿಕಾರ ಮದವೇರಿದ್ದು, ಇದರ ವಿರುದ್ದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗಿದೆ ಎಂದರು.


ಸಭೆಯಲ್ಲಿ ಪ್ರೊ. ಜಿ.ಟಿ. ವೀರಪ್ಪ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಡಾ. ಗುರುಪ್ರಸಾದ್, ವಕೀಲರಾದ ಪ್ರಸನ್ನಕುಮಾರ್, ಮರಿಯಾಲಹುಂಡಿ ಶಿವರಾಮು, ಮುಖಂಡರಾದ ಡಾ. ಪರಮೇಶ್ವರಪ್ಪ, ಸಿ.ಎಂ. ಕೃಷ್ಣಮೂರ್ತಿ, ಪದ್ಮಾಕ್ಷಿ, ಶಿವಶಂಕರ್, ಬಸವನಪುರ ರಾಜಶೇಖರ್, ಜಿ. ಬಂಗಾರು, ಜಿ.ರಾಜಪ್ಪ, ಮೊದಲಾದವರು ಇದ್ದರು.