ಕರ್ನಾಟಕ ಪುಣ್ಯ ಕ್ಷೇತ್ರ ಉಪರಾಷ್ಟ್ರಪತಿ ಬಣ್ಣನೆ

ಬೆಂಗಳೂರು, ನ. ೯- ಕನ್ನಡಿಗರು ಸಂಸ್ಕೃತಿ, ಪರಂಪರೆ, ಆಧ್ಯಾತ್ಮವನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಇಡೀ ಕರ್ನಾಟಕವೇ ಒಂದು ಪುಣ್ಯ ಕ್ಷೇತ್ರ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಕೃಷ್ಣನ್ ಹೇಳಿದರು. ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಶಾಂತಿ ಸಾಗರ ಮಹಾರಾಜರ ೧೦ ಅಡಿ ಎತ್ತರದ ಪ್ರತಿಮೆ ಅನಾವರಣ ಮಾಡಿ ಮಾತನಾಡಿದ ಅವರು, ಶ್ರವಣ ಬೆಳಗೊಳ ಜೈನ ಸಂಸ್ಕೃತಿಯ ಪ್ರತೀಕವಾಗಿದೆ. ಈ ಕ್ಷೇತ್ರ ಧಾರ್ಮಿಕತೆ, ಶಾಂತಿ, ತ್ಯಾಗದ ಸಂಕೇತವೂ ಆಗಿದೆ ಎಂದರು.


ಭಾರತೀಯ ಸಂಸ್ಕೃತಿ, ಪರಂಪರೆಗೆ ಜೈನ ಧರ್ಮದ ಕೊಡುಗೆ ಅಪಾರ. ತಮಿಳುನಾಡು ಮತ್ತು ಜೈನ ಧರ್ಮದ ಮಧ್ಯೆ ಅವಿನಾಭಾವ ಸಂಬಂಧ ಇದೆ. ತಮಿಳು ಸಾಹಿತ್ಯಕ್ಕೆ ಜೈನ ಧರ್ಮದ ಕೊಡುಗೆ ಅಪಾರವಾಗಿದೆ. ತಮಿಳುನಾಡಿನಲ್ಲೂ ಅನೇಕ ಜೈನ ಮಠಗಳು, ಮಂದಿರಗಳು ಇವೆ ಎಂದು ಹೇಳಿದರು.


ಶ್ರವಣಬೆಳಗೊಳ ಕ್ಷೇತ್ರದ ಅಭಿವೃದ್ಧಿಗೆ ಹಿಂದಿನ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಪಾರವಾಗಿ ಶ್ರಮಿಸಿದ್ದರು. ಅವರ ಕಾಲದಲ್ಲಿ ೪ ಮಹಾಮಸ್ತಾಭಿಷೇಕ ನಡೆಸಿದ್ದಲ್ಲದೆ, ಪ್ರಾಕೃತ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆ ಸ್ಥಾಪಿಸುವ ಮೂಲಕ ಜೈನ ಸಾಹಿತ್ಯದ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಭದ್ರವಾದ ಬುನಾದಿ ಹಾಕಿದ್ದರು ಎಂದು ನೆನಪಿಸಿಕೊಂಡರು.


ಹಿಂದಿನ ಅಭಿನವ ಚಾರುಕೀರ್ತಿ ಸ್ವಾಮೀಜಿಯವರು ಭಟ್ಟಾರಕ ಸ್ವಾಮೀಜಿಯವರ ಮಾರ್ಗದಲ್ಲೇ ಮುನ್ನಡೆಯುತ್ತಿದ್ದಾರೆ. ಶಾಂತಿ ಸಾಗರ ಮಹಾರಾಜರ ಭೇಟಿಯ ಶತಮಾನೋತ್ಸವ ಆಚರಿಸುವ ಮೂಲಕ ಧರ್ಮಪ್ರಜ್ಞೆ ಜಾಗೃತಿಯ ಕೆಲಸ ಮಾಡುತ್ತಿದ್ದಾರೆ ಎಂದರು. ಶಾಂತಿ ಸಾಗರ ಮಹಾರಾಜರ ತತ್ವ ಸಿದ್ದಾಂತವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕಿದೆ ಎಂದು ಅವರು ಹೇಳಿದರು.


ನಾಗರಿಕತೆಯ ಸಂಕೇತ
ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಧಾರ್ಮಿಕತೆ ಪರಂಪರೆಯ ಪ್ರತೀಕವಾಗಿರುವ ಶ್ರವಣಬೆಳಗೊಳದಲ್ಲಿ ಶಾಂತಿ ಸಾಗರ ಮಹಾರಾಜರ ಪ್ರತಿಮೆ ಅನಾವರಣವಾಗಿದೆ. ಇದು ಕೇವಲ ಕ್ಷೇತ್ರವಲ್ಲ, ನಾಗರಿಕತೆಯ ಸಂಕೇತ ಎಂದರು.
೧೯೨೫ ರಲ್ಲಿ ನಡೆದ ಬಾಹುಬಲಿಯ ಮಹಾಮಸ್ತಕಾಭಿಷೇಕದಲ್ಲಿ ೨೦ನೇ ಶತಮಾನದ ಪ್ರಥಮಾಚಾರ್ಯರಾದ ಶಾಂತಿ ಸಾಗರ ಮಹಾರಾಜರು ಭಾಗವಹಿಸಿದ್ದರು. ಅದರ ಸ್ಮರಣೆಗಾಗಿ ಶಾಂತಿಗಿರಿ ಬೆಟ್ಟದ ಅನಾವರಣ ಮಾಡಲಾಗಿತ್ತು. ಅವರ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯೋಣ. ಅವರ ಸಂದೇಶಗಳು ಆಧುನಿಕ ಭಾರತ ನಿರ್ಮಾಣಕ್ಕೆ ದಾರಿದೀಪವಾಗಿವೆ ಎಂದರು.


ಸಂತ ಪರಂಪರೆ ಬಿಂಬಿಸುವ ಕೆಲಸ
ಶಾಂತಿ, ಅಹಿಂಸೆ, ಕರುಣೆಯ ಪ್ರತೀಕವಾಗಿ ಬಾಹುಬಲಿ ಕ್ಷೇತ್ರವಾಗಿರುವ ಶ್ರವಣಬೆಳಗೊಳದಲ್ಲಿ ಸಂತ ಪರಂಪರೆ ಪರಿಚಯಿಸುವ ಕಾರ್ಯಕ್ರಮ ಇದಾಗಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಹೇಳಿ, ಧರ್ಮ ಸಂಪ್ರದಾಯಗಳು ಕೇವಲ ಗ್ರಂಥದಲ್ಲಿ ಅಲ್ಲ, ಆಚರಣೆಯಲ್ಲಿವೆ ಎಂದು ತೋರಿಸಿದವರು ಶಾಂತಿ ಸಾಗರ ಮಹಾರಾಜರು ಎಂದರು.
ಈ ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳ ಕ್ಷೇತ್ರದ ಪೀಠಾಧಿಪತಿ ಅಭಿನಮ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಸಚಿವ ಡಿ. ಸುಧಾಕರ್, ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಅಭಯ್ ಪಾಟೀಲ್, ಸಿ.ಎನ್.ಬಾಲಕೃಷ್ಣ, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.