ಕರ್ತವ್ಯನಿರತ ಟ್ರಾಫಿಕ್ ಪೊಲೀಸ್‌ಗೆ ಹಲ್ಲೆ ಆರೋಪ; ಪ್ರಕರಣ ದಾಖಲು

ಉಡುಪಿ: ಕರ್ತವ್ಯ ನಿರ್ವಹಿಸುತ್ತಿದ್ದ ಉಡುಪಿ ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿಗೆ ವಕೀಲನೋರ್ವ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿರುವ ಘಟನೆ ಮೇ ೧೭ರಂದು ಬೆಳಗ್ಗೆ ನಗರದ ಕರಾವಳಿ ಜಂಕ್ಷನ್ ಫ್ಲೈಓವರ್ ಬಳಿ ನಡೆದಿದೆ.
ಕರಾವಳಿ ಜಂಕ್ಷನ್ ಬಳಿ ವಾಹನ ಸಂಚಾರ ದಟ್ಟಣೆ ಇರುವುದರಿಂದ ಉಡುಪಿ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ದುಂಡಪ್ಪ ಮಾದರ(೩೫) ಎಂಬವರು ಬನ್ನಂಜೆ ಕಡೆಯಿಂದ ಕರಾವಳಿ ಕಡೆಗೆ ಬರುವಂತಹ ವಾಹನಗಳನ್ನು ಹ್ಯಾಂಡ್ ಸಿಗ್ನಲ್ ಮಾಡಿ ನಿಲ್ಲಿಸುತ್ತಿದ್ದರು. ಆ ಸಂದರ್ಭದಲ್ಲಿ ಸ್ಕೂಟರ್ ಸವಾರ ಕೆ ರಾಜೇಂದ್ರ ಎಂಬಾತ “ಯಾಕೆ ವಾಹವನ್ನು ತಡೆದಿರಿ, ನಾನು ಅಡ್ವೊಕೇಟ್ ಆಗಿದ್ದು, ನೀನು ಎಲ್ಲಿಂದಲೋ ಬಂದು, ಇಲ್ಲಿ ಕರ್ತವ್ಯ ನಿರ್ವಹಿಸುವ ಅವಶ್ಯಕತೆ ಇಲ್ಲ, ನಮ್ಮ ಜಿಲ್ಲೆಯನ್ನು ನಾವೇ ನೋಡಿಕೊಳ್ಳುತ್ತೇನೆ” ಎಂದು ಏಕವಚನದಲ್ಲಿ ಬೈದಿದ್ದ ಎಂದು ದೂರಲಾಗಿದೆ.
ದುಂಡಪ್ಪ ಇದನ್ನು ಪ್ರಶ್ನಿಸಲು ಮುಂದಾದಾಗ ಆರೋಪಿ ಸ್ಕೂಟರ್ ನಿಂದ ಎದ್ದು ದುಂಡಪ್ಪ ಅವರ ಕುತ್ತಿಗೆಯ ಎಡಭಾಗಕ್ಕೆ ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿ ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.