Home ಜಿಲ್ಲೆ ಮಂಗಳೂರು ಕರು ಕಳವು ಮಾಡಿ ಕಸಾಯಿಖಾನೆಗೆ ಮಾರಾಟ ಯತ್ನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಕರು ಕಳವು ಮಾಡಿ ಕಸಾಯಿಖಾನೆಗೆ ಮಾರಾಟ ಯತ್ನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಉಡುಪಿ- ಪೆರ್ಡೂರು ಗ್ರಾಮದಲ್ಲಿ ಕರು ಕಳವು ಮಾಡಿ ಕಸಾಯಿಖಾನೆಗೆ ಮಾರಾಟ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪಾಡಿಗಾರಿನ ರಾಘವೇಂದ್ರ (೩೬) ಹಾಗೂ ಪೆರ್ಡೂರು ಕುಂಜದಕಟ್ಟೆ ಸುಧೀಂದ್ರ ಶೆಟ್ಟಿ ಯಾನೆ ಬಾಬು (೩೬) ಎಂದು ಗುರುತಿಸಲಾಗಿದೆ.
ಫೆ.೧೭ರ ರಾತ್ರಿ ೧೦:೩೦ರ ಸುಮಾರಿಗೆ ರಾಘವೇಂದ್ರ ಮತ್ತು ಸುಧೀಂದ್ರ ಅವರು ಪೆರ್ಡೂರು ದೇವಸ್ಥಾನದ ಎದುರಿನ ಗದ್ದೆಯಲ್ಲಿದ್ದ ಕರುವನ್ನು ಕಳವು ಮಾಡಿ, ಕಸಾಯಿಖಾನೆಗೆ ಮಾರಾಟ ಮಾಡುವ ಉದ್ದೇಶದಿಂದ ಆಟೋ ರಿಕ್ಷಾದಲ್ಲಿ ಸಾಗಿಸಲು ಯತ್ನಿಸಿದರೆಂದು ಆರೋಪಿಸಲಾಗಿದೆ. ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ೨೦೨೦ರ ಕಲಂ ೫, ೧೨ರಂತೆ ಪ್ರಕರಣ ದಾಖಲಾಗಿತ್ತು.
ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು ಅವರ ನಿರ್ದೇಶನದಂತೆ, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪೀಕೃಷ್ಣ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಹಿರಿಯಡಕ ಠಾಣೆಯ ಪೊಲೀಸರು ರಾಘವೇಂದ್ರ (೩೬) ಮತ್ತು ಸುಧೀಂದ್ರ ಶೆಟ್ಟಿ ಬಾಬು (೩೬) ಎಂಬಿಬ್ಬರು ಆರೋಪಿಗಳನ್ನು ಬಂಧಿಸಿದ್ದಲ್ಲದೇ ಅವರು ಕೃತ್ಯಕ್ಕೆ ಬಳಸಿದ ಅಟೋರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ೧೫ ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.