
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ)ಜೂ29: ಇಲ್ಲಿನ ವಿ.ಎನ್.ರಾಯಲ್ ಗಾರ್ಡನ್ ಸಭಾಂಗಣದಲ್ಲಿ ಸಂಜೆ ನಡೆದ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿಯವರು ನಡೆಸಿಕೊಟ್ಟ ‘ಸಿರಿಸಿಂಗಾರಿ’ ಯಕ್ಷಗಾನ ಕರಾವಳಿ ಕರ್ನಾಟಕದ ಶ್ರೀಮಂತ ಕಲೆಯುನ್ನು ಅದ್ಭುತವಾಗಿ ನಗರದ ಜನತೆಗೆ ಪರಿಚಯಿಸಿತು. ನಾಟ್ಯ, ಮಾತುಗಾರಿಕೆ ಎರಡರಲ್ಲೂ ರಂಜಿಸಿದ ಕಲಾವಿದರು ಮೆಚ್ಚುಗೆಗೆ ಪಾತ್ರರಾದರು.
‘ವೀರ ಚಂದ್ರಹಾಸ’ ಚಲನಚಿತ್ರದಲ್ಲಿ ಕಥಾನಾಯಕನಾಗಿದ್ದ ಶಿಥಿಲ್ ಶೆಟ್ಟಿ ಮತ್ತು ನಾಯಕಿ ನಟಿ ನಾಗಶ್ರೀ ಜಿ.ಎಸ್. ಅವರು ವಿಶೇಷ ಆಕರ್ಷಣೆಯಾಗಿದ್ದರು. ಇಬ್ಬರೂ ತಾವು ಎಂತಹ ಅದ್ಭುತ ಕಲಾವಿದರು ಎಂಬುದನ್ನು ರಂಗದಲ್ಲಿ ಸಾಬೀತುಪಡಿಸಿದರು.
ದೇವರಿಲ್ಲ ಎಂದು ಬಲವಾಗಿ ನಂಬಿಕೊಂಡಿದ್ದ ಯುವಕನಿಗೆ ಕೊನೆಗೂ ದೇವರ ಇರುವಿಕೆ ಅರಿವಿಗೆ ಬಂದು ಅದನ್ನು ಒಪ್ಪಿಕೊಳ್ಳುವ ಸಣ್ಣ ಎಳೆಯ ಕಥೆಗೆ ಶಿವಲೀಲೆಯ ಬೆಸುಗೆ ಹಾಕಿ ಯಕ್ಷಗಾನ ಕಥೆ ಹೆಣೆಯಲಾಗಿದ್ದು, ಮಾತುಗಾರಿಕೆ, ಕುಣಿತ ಎರಡಕ್ಕೂ ಅದ್ಭುತ ಅವಕಾಶವನ್ನು ಒದಗಿಸಿಕೊಟ್ಟಿತು.
ಭಾಗವತಿಕೆಯಲ್ಲಿ ಆರ್.ವಿನಯ ಶೆಟ್ಟಿ ಕಾವ್ರಾಡಿ, ಮದ್ದಳೆಯಲ್ಲಿ ಸುಬ್ರಹ್ಮಣ್ಯ ಹೆಗಡೆ ಮೂರೂರು, ಚೆಂಡೆಯಲ್ಲಿ ರಾಕೇಶ್ ಮಲ್ಯ ಹಳ್ಳಾಡಿ ಗಮನ ಸೆಳೆದರು. ಸ್ತ್ರೀವೇಶದಲ್ಲಿ ಮಾರುತಿ ನಾಯ್ಕ ಚಿಕ್ಕನಕೋಡು, ಶ್ರೀಕಾಂತ್ ಪೂಜಾರಿ ರಟ್ಟಾಡಿ, ಹಾಸ್ಯದಲ್ಲಿ ಶ್ರೀಧರ ಭಟ್ ಕಾಸರಕೋಡು, ಸುರಾಗ್ ಹೆರೂರು, ಮುಖ್ಯ ಪಾತ್ರಗಳಲ್ಲಿ ನರಸಿಂಹ ಗಾಂವ್ಕರ್ ಯಲ್ಲಾಪುರ, ನವೀನ್ ಪೂಜಾರಿ ಕೋಡಿ, ಗಿರೀಶ್ ಮೆಕ್ಕೆಕಟ್ಟು, ಶಿಥಿಲ್ ಕುಮಾರ್ ಶೆಟ್ಟಿ ಐರ್ಬೈಲ್, ತಿಲಕ್ ರಾಜ್ ದಿವಳ್ಳಿ, ಯುವರಾಜ್ ಹೆಮ್ಮಾಡಿ, ದರ್ಶನ್ ನಾಯ್ಕ್ ಬಸುಳ್ಳಿ ರಸದೌತಣ ಉಣಬಡಿಸಿದರು. ನಗರದ ಯಕ್ಷಗಾನ ಕಲಾಸಕ್ತರು ಹಾಗೂ ಅಭಿಮಾನಿ ಸ್ನೇಹಿತರು ಈ ಕಾರ್ಯಕ್ರಮ ಸಂಘಟಿಸಿದರು.
