ಕನ್ನಡ ಸಾಹಿತ್ಯಕ್ಕೆ ವಿವೇಕದ ಪರಂಪರೆ ಇದೆ

ಸಂಜೆವಾಣಿ ನ್ಯೂಸ್
ಮೈಸೂರು:ಜ.21:-
ಕನ್ನಡ ಸಾಹಿತ್ಯ ವಿವೇಕದ ಪರಂಪರೆ ಹೊಂದಿದೆ. ಕಾವ್ಯವನ್ನು ಚರಿತ್ರೆ, ಇತಿಹಾಸವೆಂದು ಓದಬಾರದು. ಕಾವ್ಯದ ಪಾತ್ರ ನೈಜವೆಂದು ಪರಿಗಣಿಸಬಾರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.


ನಗರದ ಕಿರುರಂಗಮಂದಿರದ ಆವರಣದಲ್ಲಿ ಧ್ವನಿ ಫೌಂಡೇಷನ್ ಮತ್ತು ಎಂಎಂಕೆ ಮತ್ತು ಎಸ್‍ಡಿಎಂ ಮಹಿಳಾ ಮಹಾವಿದ್ಯಾಲಯದ ಸಹಯೋಗದಲ್ಲಿ ಮಂಗಳವಾರ ನಡೆದ ಕನ್ನಡ ಸಾಹಿತ್ಯ ಪುನರಾವಲೋಕನ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಿಗರ ಭಾಷೆ ಹುಟ್ಟಿನಲ್ಲಿ ಉದಾರವಾಗಿದ್ದರಿಂದ ಕನ್ನಡ ಸಾಹಿತ್ಯ ಮನುಕುಲಕ್ಕೆ ಸಂಬಂಧಪಟ್ಟ ವಿವೇಕವನ್ನು ಮತ್ತೆ ಮತ್ತೆ ಹೇಳುತ್ತ ಬಂದಿದೆ. ಕುಮಾರವಾಸ್ಯ, ಕನಕದಾಸ, ರತ್ನಕರ್ಣ, ವಚನಕಾರರು ಯಾರನ್ನೆ ಓದಿದರು ಒಂದು ವಿವೇಕ ಇರಲಿದೆ.


ಮಾನವ ಜಾತಿ ಒಂದೇ ವಲಂ ಪಂಪ ಹೇಳುತ್ತಾನೆ. ವಚನಕಾರರು, ದಾಸರು ಇದೆ ತತ್ವವನ್ನು ಹೇಳುತ್ತಾರೆ. ಪರಂಪರೆಯ ವಿವೇಕ ಈಗಿನ ಕಾಲಕ್ಕೆ ಶಕ್ತಿಯಾಗಬೇಕು. ಇದನ್ನು ಬಿಟ್ಟರೆ ಅವಿವೇಕವಾಗಿ ವರ್ತಿಸಬೇಕಾಗುತ್ತದೆ. ಆ ವಿವೇಕ ವರ್ತಮಾನಕ್ಕೆ ಉಳಿದಿದೆಯಾ? ನಮ್ಮಲ್ಲಿ ದ್ವೇಷ, ಅಸಹನೆ ಹೆಚ್ಚಾಗಿದೆ ಎಂದು ಹೇಳಿದರು.


ನೀವು ರಾಮನಿದ್ದನೆಂದು ಒಪ್ಪಿಕೊಂಡರೆ ಹತ್ತು ತಲೆಯ ರಾವಣ ಇದ್ದ ಎಂದು ಒಪ್ಪಿಕೊಳ್ಳಬೇಕು. ಇತಿಹಾಸ ಹತ್ತು ತಲೆ ಇದ್ದವನು ಭೂಮಿ ಮೇಲೆ ಇದ್ದ ಎಂದು ಯಾವ ವಿಜ್ಞಾನಿ, ಇತಿಹಾಸಕಾರರು ಹೇಳಿಲ್ಲ. ಹತ್ತು ತಲೆ ಇದ್ದರೆ ತಲೆ ಬ್ಯಾಲೆನ್ಸ್ ಆಗುವುದಿಲ್ಲ. ಎರಡು ಕಡೆ ಸಮಾನ ಭಾರವಾಗಿದ್ದರೆ ಮಾತ್ರ ಬ್ಯಾಲೆನ್ಸ್ ಆಗಲಿದೆ. ಇಂತಹ ಕುಚೋದ್ಯದ ಪ್ರಶ್ನೆಗಳನ್ನು ಕೇಳಬಾರದು. ಆದರೆ, ಕವಿಗಳು ಪಾತ್ರ ಕಟ್ಟಿರುವುದರಿಂದ ಒಂದು ವಿವೇಕವಿದೆ ಎಂದು ನೋಡಬೇಕು ಎಂದು ಹೇಳಿದರು.


ನಾವು ಪೂಜಿಸುವ ದೇವರುಗಳಿಗೆ ಕನ್ನಡ ಬರುತ್ತಿರಲಿಲ್ಲ. ಸಂಸ್ಕೃತದ ಮಂತ್ರ ದೈವದೀನ ದೇವರುಗಳಾಗಿದ್ದವು. ಮಂತ್ರ ಹೇಳಿ ದೇವರನ್ನು ಒಲಿಸಿಕೊಳ್ಳಬೇಕಿತ್ತು. ತಳ ಸಮುದಾಯಗಳಿಗೆ ಸಂಸ್ಕೃತ ಬರುತ್ತಿರಲಿಲ್ಲ. ನನಗೆ ಗೊತ್ತಿರದ ಭಾಷೆಯಲ್ಲಿ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ವಚನಕಾರರು ದೇವರುಗಳಿಗೆ ಕನ್ನಡ ಕಲಿಸಿದರು. ಕನ್ನಡ ಸಾಹಿತ್ಯದಲ್ಲಿ ಇಂತಹ ಹಲವಾರು ವಿಸ್ಮಯಗಳಿವೆ ಎಂದು ಹೇಳಿದರು.
ಕೃಷ್ಣದೇವರಾಯ ವಿಜಯನಗರ ವೈಭವ ಚರಿತ್ರೆಯ ಬಲೂನಿಗೆ ಪಿನ್ನು ಚುಚ್ಚಿದವರು ಕವಿಗಳು. ವಿಜಯನಗರ ವೈಭವವನ್ನು ಪುರಂದಾಸರು ಆನೆ, ಕುದುರೆ, ಒಂಟೆಯಲ್ಲ ಲೊಳಲೊಟ್ಟೆ ಎಂದು ಟೀಕಿಸಿದರು. ಈಗ ವೈಭವದಿಂದ ಇದ್ದವನಿಗೆ ಮತ್ತೆರಡು ಪದ ಸೇರಿಸಿ ಹೊಗಳುವುದು ಹೆಚ್ಚಾಗಿದೆ. ಆದರೆ, ರಾಜಸ್ಥಾನದಲ್ಲಿದ್ದರು ನಮ್ಮ ಕವಿಗಳು ವೈಭವ ಸಾಮಾಜ್ಯದ ಹುಳುಕುಗಳನ್ನು ತೋರಿಸಿದರು. ಕನ್ನಡ ವಿವೇಕವನ್ನು ಇಂದಿನ ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ಉಳಿಸಬೇಕು. ಆಗ ಭಾಷೆ, ಸಂಸ್ಕೃತಿ ಉಳಿಯಲಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ನಯನಕುಮಾರಿ, ಕಾಲೇಜಿನ ಪ್ರಾಂಶುಪಾಲೆ ಪೆÇ್ರ.ಎನ್.ಭಾರತಿ ಹಾಜರಿದ್ದರು.