ಕನ್ನಡ ಭಾಷೆಯನ್ನು ಪ್ರೀತಿಸಿ ಗೌರವಿಸಿ: ಶಾಸಕ ಹೆಚ್.ಟಿ.ಮಂಜು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ನ.02:
ಕನ್ನಡ ಭಾಷೆಯನ್ನು ಪ್ರೀತಿಸಿ, ಗೌರವಿಸಿ, ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಕೆಲಸವನ್ನು ಅಭಿಮಾನದಿಂದ ಮಾಡಲು ಶಾಸಕ ಹೆಚ್.ಟಿ.ಮಂಜು ಕರೆ ನೀಡಿದರು.
ಅವರು ಪಟ್ಟಣದ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ 70 ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ವಿವಿಧ ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದರು.


ಕನ್ನಡದ ನೆಲದಲ್ಲಿ ಕನ್ನಡಿಗನೆ ಸಾರ್ವಭೌಮನಾದ್ದರಿಂದ ಕನ್ನಡ ನಾಡಿನಲ್ಲಿ ಕನ್ನಡವೆ ಆಡಳಿತ ಭಾಷೆಯಾಗಬೇಕು. ಸರೋಜಿನಿ ಮಹಿಷಿ ವರದಿಯನ್ನು ಸಮಗ್ರವಾಗಿ ಜಾರಿಮಾಡುವ ಇಚ್ಚಾ ಶಕ್ತಿಯನ್ನು ರಾಜ್ಯ ಸರಕಾರ ಪ್ರದರ್ಶಿಸಬೇಕು. ಸಾವಿರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದೆಯಲ್ಲದೆ ಶಾಸ್ತ್ರೀಯ ಸ್ಥಾನ ಮಾನ ಹೊಂದಿರುವ ಭಾಷೆಯಾಗಿದ್ದರೂ ಅನ್ಯ ಭಾಷಿಕರ ಹಾವಳಿಯಿಂದ ಕನ್ನಡ ಭಾಷೆಗೆ ಆಪತ್ತು ಎದುರಾಗಿದೆ. ಕನ್ನಡಿಗರಾದ ನಾವು ನಮ್ಮ ಭಾಷೆಯ ಬಗ್ಗೆ ನಿರಭಿಮಾನಿಗಳಾಗದೆ ಕಣ ಕಣದಲ್ಲಿಯೂ ಕನ್ನಡ ಪ್ರೇಮವನ್ನು ಬೆಳೆಸಿಕೊಂಡು, ಬೀದಿಗಿಳಿದು ಹೋರಾಟ ನಡೆಸಲು ಸದಾ ಸಿದ್ದರಿರಬೇಕು ಎಂದು ಶಾಸಕ ಮಂಜು ಮನವಿ ಮಾಡಿದರು.


ತಹಶೀಲ್ದಾರ್ ಲೆಫ್ಟಿನೆಂಟ್ ಕರ್ನಲ್ ಡಾ.ಅಶೋಕ್ ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜವನ್ನು ಆರೋಹಣ ಮಾಡಿ ಧ್ವಜ ಸಂದೇಶ ನೀಡಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಜಯಕೀರ್ತಿ ಕನ್ನಡ ನಾಡು ನುಡಿಯ ಬಗೆಗೆ ವಿಶೇಷ ಉಪನ್ಯಾಸವನ್ನು ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತಲ್ಲದೆ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್,
ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಸುಷ್ಮ, ಪೆÇಲೀಸ್ ಇನ್ಸೆಕ್ಟರ್ ಸುಮಾರಾಣಿ, ಬಿಇಓ ವೈ.ಕೆ.ತಿಮ್ಮೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಬಲದೇವ್, ಕರವೇ ಜಿಲ್ಲಾ ಅಧ್ಯಕ್ಷ ವೇಣು, ಯುವ ಘಟಕದ ಅಧ್ಯಕ್ಷ ಸಿ.ಬಿ.ಚೇತನ್ ಕುಮಾರ್, ಟೆಂಪೆÇೀ ಶ್ರೀನಿವಾಸ್, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಸೋಮಶೇಖರ್, ಸಿಡಿಪಿಓ ವಿದ್ಯಾವತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆನಂದ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಆರ್.ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪುರ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.