ಕನ್ನಡ ಬೆಳೆಸಲು ಅಲೆಮಾರಿಗಳ ಕೊಡುಗೆಯೂ ಬಹಳಷ್ಟಿದೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ ಜೂ,18:
ಕನ್ನಡ ನಾಡಿನ ಏಕೀಕರಣಕ್ಕೆ ಮುನ್ನುಡಿಯನ್ನು ಬರೆದ ಜಿಲ್ಲೆ ಬಳ್ಳಾರಿಯಾಗಿದೆಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಎನ್.ಯಶ್ವಂತರಾಜ್ ಹೇಳಿದರು.
ಅವರು ನಗರದಲ್ಲಿ ಕನ್ನಡ ಸಾಂಸ್ಕೃತಿಕ ಪರಿಷತ್ತು ಆಯೋಜಿಸಿದ್ದ “ಕನ್ನಡ ಅಭಿಮಾನ – ಅಭಿಯಾನ” ಕಾರ್ಯಕ್ರಮ ಉದ್ಘಾಟಿಸಿ,ಹುತಾತ್ಮ ಪೈಲ್ವಾನ್ ರಂಜಾನ್ ಸಾಬ್ ಕೃತಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು.
ಲೇಖಕ ಸಿದ್ದರಾಮ ಕಲ್ಮಠ ಪ್ರಾಸ್ತಾವಿಕವಾಗಿ ಮಾತನಾಡಿ,ಅನೇಕ ಹೋರಾಟಗಾರರ ಮುಂದಾಳತ್ವದಲ್ಲಿ ಏಕೀಕರಣ ಚಳುವಳಿ ರೂಪುಗೊಂಡಿದೆ. ನಾಡಸೇವೆಗೆ ತಮ್ಮ ಬದುಕನ್ನು ಮುಡಿಪಿಟ್ಟು ಹುತಾತ್ಮರಾದ ರಂಜಾನ್ ಸಾಬ್ ರನ್ನು ಕನ್ನಡಿಗರು ಸದಾ ಸ್ಮರಿಸಬೇಕು ಎಂದರು. ಜೆ.ಕೆ.ಪೌಂಡೇಶನ್ ಅಧ್ಯಕ್ಷ, ಜೋಳದರಾಶಿ ತಿಮ್ಮಪ್ಪ ಮಾತನಾಡಿ,ಯುವ ತಲೆಮಾರು ನಮ್ಮ ನಾಡು ನುಡಿಯ ಬಗ್ಗೆ ಹೆಚ್ಚು ತಿಳಿಯಬೇಕು ಎಂದರು. ಪಾಲಿಕೆಯ ಸಭಾನಾಯಕ ಪಿ.ಗಾದೆಪ್ಪ , ಒಳ್ಳೆಯ ಪುಸ್ತಕಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುತ್ತವೆಂದರು.
ಚಿಂತಕ ಬಾದಾಮಿ ಶಿವಲಿಂಗ ನಾಯಕ ಮಾತನಾಡಿ ನೇಪಥ್ಯದಲ್ಲಿದ್ದ ಹೋರಾಟಗಾರನ ವಿವರಗಳನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುವ ಈ ಕೃತಿಯು ವಿದ್ಯಾರ್ಥಿಗಳಿಗೆ ಬಹು ಉಪಯುಕ್ತವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಪ್ರಾಂಶುಪಾಲ ಡಾ.ಅಶ್ವ ರಾಮು ಅವರು ಕನ್ನಡ ಭಾಷೆಯನ್ನು ಬೆಳೆಸಲು ಅನೇಕ ಅಲೆಮಾರಿ ಸಮುದಾಯಗಳ ಕೊಡುಗೆಯೂ ಬಹಳಷ್ಟಿದೆ.ಅಂತವರ ಬಗ್ಗೆಯೂ ಕನ್ನಡಿಗರ ಗಮನ ಸೆಳೆಯಬೇಕು ಎಂದರು.
ಸಾಹಿತಿ ವೀರೇಂದ್ರ ರಾವಿಹಾಳ್,ನಟ ಬಸವರಾಜ್ ಜೋಳದರಾಶಿ,ಐ.ಎಂ.ಮಹೇಶ್ ಇತರರಿದ್ದರು.
ಪ್ರಶಿಕ್ಷಣಾರ್ಥಿ ಶಾರದಾ ಕಾರ್ಯಕ್ರಮ ನಿರೂಪಿಸಿದರು ಸುಷ್ಮಾ ಪ್ರಾರ್ಥಿಸಿದರು,ಅಧ್ಯಾಪಕ ಆಲಂ ಭಾಷಾ ವಂದಿಸಿದರು.