ಕನ್ನಡ ಒಂದು ಸುಂದರ ಸರಳ ಭಾಷೆ: ಲಿಂಗರಾಜು

ಸಂಜೆವಾಣಿ ವಾರ್ತೆ
ಚಾಮರಾಜನಗರ. ನ.05-
ಕನ್ನಡ ಭಾಷೆ ಒಂದು ಸುಂದರ ಸರಳ ಭಾಷೆ ಎಂದು ಶ್ರೀ ಭುಜಂಗೇಶ್ವರ ಸ್ವಾಮಿ ಸೇವಾ ಸಮಿತಿ ಗೌರವಾಧ್ಯಕ್ಷರಾದ ಎಲ್. ಲಿಂಗರಾಜುರವರು ಬಣ್ಣಿಸಿದರು.
ಅವರು ನಗರದ ಶ್ರೀ ಭುಜಂಗೇಶ್ವರ ಸ್ವಾಮಿ ಸೇವಾ ಸಮಿತಿ ವತಿಯಿಂದ ಭುಜಂಗೇಶ್ವರ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಅತ್ಯಂತ ಪ್ರಾಚೀನವಾದ ಭಾಷೆ. ಇದು ಒಂದು ಸುಂದರವಾದ ಸರಳ ಭಾಷೆಯಾಗಿದ್ದು, ಎಲ್ಲರಿಗೂ ಅರ್ಥವಾಗುವಂತಹ ಭಾಷೆಯಾಗಿದೆ ಎಂದರು. ಕನ್ನಡದ ಅನೇಕ ಸಾಹಿತಿಗಳು, ವಿಜ್ಞಾನಿಗಳು, ಕಲಾವಿದರು ತಮ್ಮ ಸಾಧನೆಯಿಂದ ವಿಶ್ವಖ್ಯಾತಿಯನ್ನು ಪಡೆದಿದ್ದಾರೆ.


ಮಾಜಿ ನಗರಸಭಾ ಸದಸ್ಯ ಗೋಪಾಲಕೃಷ್ಣ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕನ್ನಡ ಭಾಷೆಯ ಬಗ್ಗೆ ಕೇವಲ ನವಂಬರ್ ತಿಂಗಳಿನಲ್ಲಿ ಕೊಂಡಾಡಿದರೆ ಸಾಲದು. ವರ್ಷವಿಡೀ ಕನ್ನಡದ ನೆಲ, ಜಲ ಭಾಷೆಯ ಬಗ್ಗೆ ಅಭಿಮಾನ ಹೊಂದಬೇಕು ಎಂದು ಕರೆ ನೀಡಿದರು.


ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಚಂದ್ರಶೇಖರ್, ಮಾಜಿ ನಗರಸಭಾ ಸದಸ್ಯ ಮಂಜುನಾಥ್, ನಂದೀಶ್ ಗುಂಬಳ್ಳಿ, ಉಮೇಶ್ ಸೇರಿದಂತೆ ಸಮಿತಿಯ ಹಲವಾರು ಪದಾಧಿಕಾರಿಗಳು ಹಾಜರಿದ್ದರು.