ಕನಕ ದಾಸರ ಕೀರ್ತನೆಗಳ ಅಂಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಿ: ಹರೀಶ್ ಗೌಡ

ಸಂಜೆವಾಣಿ ನ್ಯೂಸ್
ಮೈಸೂರು: ನ.09:-
ಕನಕದಾಸರ ಕೀರ್ತನೆಗಳ ಸಾರವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಗೌಡ ಅವರು ಹೇಳಿದರು.
ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಜಿಲ್ಲೆ ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಕನಕ ದಾಸರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಹಳಗನ್ನಡ, ಗಧ್ಯ ಕನ್ನಡದಲ್ಲಿ ಇರುವ ಕನಕದಾಸರ ಕೀರ್ತನೆಗಳನ್ನು ಹೊಸ ಗನ್ನಡಕ್ಕೆ ಪರಿವರ್ತಿಸಿ ಜನರಿಗೆ ತಲುಪಿಸಿ ಎಲ್ಲಾ ಸಮುದಾಯದವರಿಗೂ ಸಿಗುವಂತೆ ಆದಾಗ ಮನೆ ಮನಗಳಲ್ಲಿ ಕನಕದಾಸರ ಚಿಂತನೆಗಳು ಬೆಳಗಲಿವೆ. ಪದವಿ ಓದುವಾಗ ಕವಿರತ್ನ ಕಾಳಿದಾಸ ಪಠ್ಯ ಇತ್ತು. ಕನಕದಾಸರ ಹುಟ್ಟೂರಾದ ಬಾಡಗೆ ಭೇಟಿ ನೀಡಿ ಅವರ ಇತಿಹಾಸ ಅರಿತುಕೊಂಡಿರುವೆ. ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅತಿಹೆಚ್ಚು ಅನುದಾನ ನೀಡಿದ್ದಾರೆ ಎಂದರು.


ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಮಾತನಾಡಿ, ಮಹನೀಯರ ಆದರ್ಶಗಳನ್ನು ಇಂದಿನ ಸವಾಜ ಅನುಸರಿಸುತ್ತಿಲ್ಲ. ಹೀಗಾಗಿ ಸಮಾಜದಲ್ಲಿ ಮೌಲ್ಯಗಳು ಅಧಃಪತನವಾಗುತ್ತಿವೆ. ಸಮ ಸಮಾಜ ನಿರ್ಮಾಣಕ್ಕೆ ದಾರ್ಶನಿಕರ ಆದರ್ಶಗಳು ಮುಖ್ಯ. ಇವುಗಳನ್ನು ನಾವು ಪಾಲಿಸಬೇಕು ಎಂದು ಹೇಳಿದರು.


ಶ್ರೀ ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಅವರು ಮಾತನಾಡಿ ಧರ್ಮದ ಉನ್ನತಿಗೆ, ಅಧರ್ಮವನ್ನು ಹೊಗಲಾಡಿಸಲು ಹಲವಾರು ಮಹಾತ್ಮರು ಭೂಮಿಗೆ ಬಂದು ಅಸಮಾನತೆಯ ವಿರುದ್ಧ ಹೋರಾಟ ಮಾಡಿದ್ದಾರೆ. ಅವರೆಲ್ಲರೂ ಆಯಾ ಕಾಲದಲ್ಲಿ ಒಬೊಬ್ಬರೇ ಹೋರಾಟ ಮಾಡಿ ಸುಧಾರಣೆ ತರುತ್ತಿದ್ದರು. ಆದರೆ, ಪ್ರಸ್ತುತ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ದಲಿತರು ಹೋರಾಟ ಮಾಡುತ್ತಿದ್ದೇವೆ. ಆದರೆ, ಸಮ ಸಮಾಜ ನಿರ್ಮಾಣವಾಗಿಲ್ಲ. ಇದಕ್ಕೆ ಈ ಸಮಾಜಗಳ ದೌರ್ಬಲ್ಯವೇ ಕಾರಣ ಎಂದು ಹೇಳಿದರು.


ಪುರುಷರಿಗೆ ಯೋಜನೆ ಕೊಟ್ಟರೆ ದುರುಪಯೋಗ ಆಗುವುದನ್ನು ಮನಗಂಡು ಮಹಿಳೆಯರಿಗೆ ಕೊಟ್ಟು ಕೌಟುಂಬಿಕ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಮುಂದಾಗಿದೆ. ಇಂದು ಎಲ್ಲರು ಮಹಿಳೆಯರ ಪರ ಮಾತನಾಡುತ್ತಾರೆ. ಅಬಕಾರಿ ಇಲಾಖೆಯನ್ನು ಸಾಕುತ್ತಿರುವುದೇ ಹಿಂದುಳಿದ ಸಮುದಾಯಗಳು ಎಂದು ಬೇಸರ ವ್ಯಕ್ತಪಡಿಸಿದರು.


ಕನಕದಾಸರ ಪವಾಡಗಳನ್ನು ಸರಿಯಾಗಿ ಅರ್ಥಮಾಡಿಕೊಂಡಾಗ ಕೌಟುಂಬಿಕ ಸಮಸ್ಯೆಗಳು ಬಗೆಹರಿಸಲಿವೆ. ಪ್ರಾಣಿವಧೆ ತಡೆಹಿಡಿದವರು ಕನಕದಾಸರು. ಆದರೆ, ಸಮುದ್ರದಲ್ಲಿರುವ ಪ್ರಾಣಿಗಳು ಮನುಷ್ಯನಿಗೆ ಸಾಲುತ್ತಿಲ್ಲ. ಇದು ಈಗೀನ ಆಹಾರ ಪದ್ಧತಿ ಆಗಿರಬಹುದು. ಆದರೆ, ಅದು ಮಿತವಾಗಿರಬೇಕು ಎಂದು ಹೇಳಿದರು.


ಶ್ರೀ ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಅವರು ಮಾತನಾಡಿ, ನಾಡಿನ ಸಾಹಿತ್ಯ ಲೋಕದ ಅಮೂಲ್ಯ ರತ್ನ ಕನಕದಾಸರು. ಕ್ರಾಂತಿಕಾರಿ ವಿಚಾರಗಳನ್ನು ಮಂಡಿಸಿದವರು ಕನಕದಾಸರು. ಅವರನ್ನು ಮೆರವಣಿಗೆಯಲ್ಲಿ ಕಾಣುವುದಕ್ಕಿಂತ ಬರವಣಿಗೆಯಲ್ಲಿ ಕಾಣಬೇಕು. ಅವರ ಒಂದೊಂದು ಕೀರ್ತನೆಗಳ ಮೇಲೆ ಒಂದೊಂದು ಪಿಎಚ್‍ಡಿ ಮಾಡಬಹುದು ಎಂದರು.
ಅಹಿಂದ ವರ್ಗಕ್ಕೆ ಆರಾಧನೆ, ಆಚರಣೆ, ಅನುಸರಣೆ ಮೂರು ಆಚರಣೆಗಳಿವೆ. ನಾವು ಕನಕದಾಸರನ್ನು ಓದಿಕೊಂಡು ಅನುಸರಣೆ ಮಾಡಬೇಕು. ಭಾರತದ ದೇಶದ ಸಂವಿಧಾನದ ಅಂಶಗಳು ಕನಕದಾಸರ ಕೀರ್ತನೆಗಳಲ್ಲಿವೆ. ಪ್ರಖಂಡ ಜ್ಞಾನಿಗಳಾದ ಕನಕದಾಸರ ಬಗ್ಗೆ ಅಧ್ಯಯನ ಮಾಡಬೇಕು. ಆ ಮೂಲಕ ಸಮುದಾಯವನ್ನು ಜಾಗೃತಗೊಳಿಸಬೇಕು. ಏಕೆಂದರೆ ಯಾರ ಮುಲಾಜಿಗೂ ಒಳಗಾಗದ ದಾಸ ಶ್ರೇಷ್ಠ ಕನಕದಾಸರು ಎಂದು ಹೇಳಿದರು.
ಸ್ವಾಭಿಮಾನ, ಘನತೆ ಬದುಕಿಗಾಗಿ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದೆ. ಆದರೆ, ಅದರ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಮತಕ್ಕಾಗಿ ಐದು ಗ್ಯಾರಂಟಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಹಸಿವನ್ನು ಕಾಣದವರು ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡುತ್ತಾರೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ನ ಸದಸ್ಯರಾದ ಡಾ.ಡಿ. ತಿಮ್ಮಯ್ಯ ಸಿ.ಎನ್.ಮಂಜೇಗೌಡ, ಕೆ.ಶಿವಕುಮಾರ್ , ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಮಪ್ಪ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ರಂಗಸ್ವಾಮಿ, ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯುಕೇಶ್ ಕುಮಾರ್ ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ರಾದ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕರಾದ ಎಂ.ಡಿ.ಸುದರ್ಶನ್, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಜಯಂತಿ ಸಮಿತಿಯ ಸದಸ್ಯರಾದ ಮಹಾದೇವಗೌಡ, ವಿಶ್ವನಾಥ, ಟಿ.ಬಿ.ಚಿಕ್ಕಣ್ಣ, ನಾಗೇಂದ್ರ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.