
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ನ.09: ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಡೊಂಕುಗಳನ್ನು ತಿದ್ದಿದವರು. ಬಡವರ ಪರವಾದ ಚಿಂತನೆಗಳನ್ನು ಇಟ್ಟುಕೊಂಡು ಕೀರ್ತನೆಗಳನ್ನು ಜಗತ್ತಿಗೆ ಕೊಟ್ಟವರು. ಶೂದ್ರ ಸಮುದಾಯದ ಕೀರ್ತಿಯನ್ನು ತಮ್ಮ ದಾಸವಾಣಿಗಳ ಮೂಲಕ ಜಗತ್ತಿಗೆ ತೋರಿಸಿಕೊಟ್ಟವರು ಕನಕದಾಸರು ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.
ಅವರು ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಕನಕ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಅಂದಿನ ಕಾಲಘಟ್ಟದಲ್ಲಿ ಶೂದ್ರರಿಗೆ ಮಠ ಮಾನ್ಯಗಳಿಗೆ ಪ್ರವೇಶವಿರಲಿಲ್ಲ. ಕನಕರು ತಮ್ಮ ಜ್ಞಾನದ ಮೂಲಕ ಉಡುಪಿಯ ಶ್ರೀ ಮಠವನ್ನು ಪ್ರವೇಶಿಸಿ ಜ್ಞಾನ ಸಂಪಾದನೆಯನ್ನು ಮಾಡಿದವರು. ಜಗತ್ತಿನಲ್ಲಿ ದೇವರು ಇರದ ಸ್ಥಳವೆ ಇಲ್ಲ ಎಂಬ ಸಾರ್ವಕಾಲಿಕ ಸತ್ಯವನ್ನು ಜಗಕ್ಕೆ ತೋರಿಸಿದವರು. ಕನಕದಾಸರ ಭಕ್ತಿಗೆ ಮೆಚ್ಚಿ ಕನಕದಾಸರು ಇರುವಲ್ಲಿಯೆ ದರ್ಶನವನ್ನು ಕೊಟ್ಟರು ಶ್ರೀ ಕೃಷ್ಣ. ಕನಕರಿಗೆ ದರ್ಶನ ಕೊಟ್ಟ ಜಾಗವು ಇಂದಿಗೂ ಉಡುಪಿಯಲ್ಲಿದ್ದು ಪೂಜೆಗೆ ಒಳಗಾಗಿದೆ. ಬುದ್ದ, ಬಸವ, ಕನಕಾದಿ ದಾರ್ಶನಿಕರು ಮತ್ತು ಸಮಾಜ ಸುದಾರಕರು ಸರ್ವ ಸಮಾಜದ ಸ್ವತ್ತು. ನಾಡಿನ ಶ್ರೇಷ್ಠ ದಾರ್ಶನಿಕರ ಕನಸುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ಮಾಡಬೇಕು ಎಂದು ಶಾಸಕ ಮಂಜು ತಿಳಿಸಿದರು.
ತಾಲೂಕಿನಲ್ಲಿ ಕನಕದಾಸರ ತತ್ವಗಳನ್ನು ಜೀವಂತವಾಗಿಡಲು ಅರ್ಧಕ್ಕೆ ನಿಂತು ಹೋಗಿರುವ ಕನಕ ಭವನ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆ ಮಾಡಿಸಲು ಪ್ರಯತ್ನಿಸಿದ್ದೇನೆ. ರಾಜಕೀಯವನ್ನು ಬದಿಗೊತ್ತಿ ಸಮುದಾಯದ ಹಿತವನ್ನು ಕಾಯಲು ನಾನು ಹಗಲಿರುಳು ಶ್ರಮಿಸುತ್ತೇನೆ. ಇತ್ತೀಚೆಗೆ ನಡೆದ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಸಮುದಾಯದ ವ್ಯಕ್ತಿಯನ್ನು ಅತ್ಯಂತ ಹೆಚ್ಚು ಮತಗಳಿಂದ ಆರಿಸಿ ಬರುವಂತೆ ನೋಡಿಕೊಂಡು ಗೌರವಿಸಿದ್ದೇನೆ. ಸರಕಾರದ ನಡೆಯ ಬಗೆಗೆ ವೈಯುಕ್ತಿಕವಾಗಿ ನನಗೆ ಬೇಸರವಿದೆ. ಜನರ ಹಿತವನ್ನು ಕಾಪಾಡಲು ಎಲ್ಲಾ ರೀತಿಯಲ್ಲಿಯೂ ಪ್ರಯತ್ನವನ್ನು ಮಾಡುತ್ತಿದ್ದೇನೆ. ಕನಕದಾಸರ ಚಿಂತನೆಗಳನ್ನು ಸಾಕಾರಗೊಳಿಸಲು ಸದಾ ಸಮುದಾಯದ ಜೊತೆಯಲ್ಲಿ ನಿಲ್ಲುತ್ತೇನೆ ಎಂದು ಶಾಸಕ ಮಂಜು ಹೇಳಿದರು.
ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಹುಣಸೂರಿನ ಕೊತ್ತತ್ತಿ ಗ್ರಾಮದ ಪ್ರೌಢಶಾಲಾ ಶಿಕ್ಷಕ ಮಹದೇವ್ ಕಲ್ಕುಣಿ ಅವರು ಜನಕರ ಚಿಂತನೆಗಳನ್ನು ಜನರಿಗೆ ತಮ್ಮ ಉಪನ್ಯಾಸದ ಮೂಲಕ ಸಾದರಪಡಿಸಿ ಕನಕದಾಸರದು ಅಭಾವ ವೈರಾಗ್ಯವಲ್ಲ ಬದಲಾಗಿ ಸ್ವಭಾವ ವೈರಾಗ್ಯ. ದಾರ್ಶನಿಕರ ಚಿಂತನೆಗಳ ಮೂಲಕ ನಾವೆಲ್ಲರೂ ಮನುಷ್ಯ ಮನುಷ್ಯರ ನಡುವೆ ಗೋಡೆಗಳನ್ನು ಕಟ್ಟುವ ಬದಲು ಸೇತುವೆಗಳನ್ನು ಕಟ್ಟೋಣ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್,ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸುಷ್ಮ, ಆರ್‍ಟಿಓ ಸಂಘದ ರಾಜ್ಯಾಧ್ಯಕ್ಷ ಹಾಗೂ ಸಮಾಜಸೇವಕ ಮಲ್ಲಿಕಾರ್ಜುನ್, ಜಿ.ಪಂ ಮಾಜಿ ಸದಸ್ಯರಾದ ರಾಮದಾಸ್, ಎಲ್.ಕೆ.ಮಂಜುನಾಥ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಕೆ.ಪುರುಷೋತ್ತಮ್, ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಶಶೀಧರ, ನಿರ್ದೇಶಕರುಗಳಾದ ಕೆ.ಸಿ.ಮಂಜುನಾಥ್, ಪ್ರಸನ್ನಕುಮಾರ್, ಒಕ್ಕಲಿಗರ ಸಂಘದ ಅಧ್ಯಕ್ಷ ಆರ್.ಎಸ್.ಶಿವರಾಮೇಗೌಡ, ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ತೋಂಟಪ್ಪಶೆಟ್ಟಿ, ಪುರಸಭಾ ಸದಸ್ಯರಾದ ಕೆ.ಆರ್.ರವೀಂಧ್ರಬಾಬು, ಡಿ.ಪ್ರೇಮಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ನಾಗರಘಟ್ಟ ದಿಲೀಪ್, ತಾಲೂಕು ಕಾಳಿದಾಸ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಂಜೇಗೌಡ, ಕಾರ್ಯದರ್ಶಿ ಕೆ.ಎಸ್.ಚಂದ್ರು ಸೇರಿದಂತೆ ಹಲವರಿದ್ದರು.



























