ಕಥೆ ಜೀವ ಪರವಾಗಿರಬೇಕು: ಬಾನು ಮುಷ್ತಾಕ್

ಸಂಜೆವಾಣಿ ನ್ಯೂಸ್
ಮೈಸೂರು:ಜು.06:-
ಕಥೆಗಳ ಮೂಲಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಬರಹಗಾರರ ಕೆಲಸವಲ್ಲ. ಕಥೆ ಓದುಗರಿಂದ ಬೆಳೆಯಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಕಥೆ ಜನಪರ, ಜೀವಪರ ಆಗಿರಬೇಕು ಎಂದು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅಭಿಪ್ರಾಯ ಪಟ್ಟರು.


ನಗರದಲ್ಲಿ ಮೈಸೂರು ಲಿಟರರಿ ಫೆÇೀರಂ ಚಾರಿಟಬಲ್ ಟ್ರಸ್ಟ್ ಹಾಗೂ ಮೈಸೂರು ಬುಕ್ ಕ್ಲಬ್ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಿರುವ ಮೈಸೂರು ಸಾಹಿತ್ಯ ಸಂಭ್ರಮ-2025 9ನೇ ಅವೃತ್ತಿಯ ಮೊದಲ ಗೋಷ್ಠಿಯಲ್ಲಿ ಮಾತನಾಡಿದ ಅವರು,


ಎಲ್ಲರನ್ನೂ ಮೆಚ್ಚಿಸುವುದು ಲೇಖಕಿಯ ಕೆಲಸವಲ್ಲ. ನಾವು ಬರೆದದ್ದು ಕೆಲವರಿಗೆ ಅಸಂತೋಷವೂ ಆಗಬಹುದು. ಕಥೆಗಳಿಗೆ ಅಂತ್ಯ ಇರಲೇಬೇಕು ಎಂದೇನೂ ಇಲ್ಲ. ಓದುಗರು ಅದನ್ನು ವಿಸ್ತರಿಸಬಹುದು. ಜತೆಗೆ ಅಲ್ಲಿನ ಸಮಸ್ಯೆಗೆ ಅವರೇ ಪರಿಹಾರ ಹುಡುಕಿಕೊಳ್ಳಬೇಕು ಎಂದು ತಿಳಿಸಿದರು.


ಬದುಕು ಯಾವಾಗಲೂ ಗೋಳೇ ಆಗಿರುವುದಿಲ್ಲ. ಹೋರಾಟ, ಸಂತೋಷ, ನಗು, ವ್ಯಂಗ್ಯ ಎಲ್ಲದರ ಸಂಗಮವದು. ಬಡವರಲ್ಲಿ ಹಣ ಇಲ್ಲ ಅಂದ ಮಾತ್ರಕ್ಕೆ ಸದಾ ಅಸಂತೋಷದಿಂದ ಇರುತ್ತಾರೆ ಎಂದೇನೂ ಇಲ್ಲ ಎಂದರು.
ಎಷ್ಟೋ ಜನ ನೀವು ಉರ್ದು ಭಾಷೆಯಲ್ಲಿ ಬರೆಯಬೇಕಿತ್ತು ಎನ್ನುತ್ತಾರೆ. ಆದರೆ ಉರ್ದುವಿನಲ್ಲಿ ನನಗೆ ಬರೆಯಲು ಬರುವುದಿಲ್ಲ.


ಆದರೆ, ಕನ್ನಡದಿಂದ ಉರ್ದುಗೆ ನನ್ನ ಕೃತಿ ಅನುವಾದವಾಗಿದೆ. ನನ್ನ ಎಲ್ಲಾ ಕಥೆಗಳ ಮನೋಭೂಮಿಕೆ ಭರವಸೆ, ಜೀವನೋತ್ಸಾಹ. ನಿರಾಶಾದಾದದ ಕಡೆ ನನ್ನ ಕಥೆ ಹೋಗುವುದಿಲ್ಲ ಎಂದರು.
ಗಂಡಾಳ್ವಿಕೆ ಜೀವಂತ: ಗಂಡಾಳ್ವಿಕೆ ಕೇವಲ ಮುಸ್ಲಿಂ ಸಮುದಾಯದಲ್ಲಿ ಮಾತ್ರವಲ್ಲ. ಅದು ಎಲ್ಲಾ ಕಡೆಯೂ ಇದೆ. ಕೆಲವು ಹೆಂಗಸರಲ್ಲೂ ಗಂಡಾಳ್ವಿಕೆ ಇದೆ. ಅದೇರೀತಿ ತಾಯಿ ಹೃದಯ ಗಂಡಸರಲ್ಲೂ ಇದೆ. ಹೀಗಾಗಿ ಗಂಡಾಳ್ವಿಕೆಯನ್ನು ಲಿಂಗಾಧರಿತವಾಗಿ ನೋಡಬಾರದು ಎಂದು ಅಭಿಪ್ರಾಯ ಪಟ್ಟರು.


ನಾನು ಬರೆಯಲು ಶುರು ಮಾಡಿದ್ದು 70-80ರ ಕಾಲಘಟ್ಟದಲ್ಲಿ. ಆಗೆಲ್ಲ ಕೆಲವು ಲೇಖಕರು ಮುಸ್ಲಿಂ ಮಹಿಳೆಯರ ಬಗ್ಗೆ ಏನೂ ಬರೆಯದೆ ಮುಸ್ಲಿಂ ಪುರುಷರನ್ನು ದೈವಾಂಶ ಸಂಭೂತ ಎಂದೋ ಇಲ್ಲ ಅತ್ಯಂತ ಕೆಟ್ಟವ ಎಂದು ಬಿಂಬಿಸುತ್ತಿದ್ದರು. ಅಲ್ಲದೇ ಎಲ್ಲಾ ಸಮುದಾಯಗಳಲ್ಲಿ ಒಳ್ಳೆಯವರು ಕೆಟ್ಟವರು ಇರುತ್ತಾರೆ. ಇಂತಹ ನೈಜ ಸಾಮಾಜಿಕ ಚಿತ್ರಣ ಬರೆಯುವ ಉದ್ದೇಶದಿಂದಲೇ ಬರವಣಿಗೆ ಪ್ರಾರಂಭಿಸಿದೆ ಎಂದರು.
ಲೇಖಕಿ ದೀಪಾ ಭಾಸ್ತಿ ಮಾತನಾಡಿ, ಅನುವಾದವು ಲೇಖಕರ ಅಭಿವ್ಯಕ್ತಿಯನ್ನು ಮತ್ತೊಂದು ಭಾಷೆಯಲ್ಲಿ ದಾಟಿಸುವುದಾಗಿದೆ. ಅದು ಸೃಜನತ್ವದ ರೂಪಾಂತರ. ಕಥೆಗಳನ್ನು ಅನುವಾದ ಮಾಡುವ ಮುನ್ನ ಬಾನು ಮುಷ್ತಾಕ್ ಅವರೊಂದಿಗೆ ಚರ್ಚೆ ಮಾಡಿದ್ದೆ. ಇಲ್ಲಿನ ಮೂಲ ಶೈಲಿಯನ್ನೇ ಬಳಸಿಕೊಂಡ ಕಾರಣ ಎಲ್ಲಿಯೂ ಧಕ್ಕೆ ಆಗಲಿಲ್ಲ ಎಂದರು.
ಲೇಖಕ ಭರತ್ ದಿವಾಕರ್ ಗೋಷ್ಠಿ ನಡೆಸಿಕೊಟ್ಟರು.