ಕಡಬ ನೂತನ ಪಟ್ಟಣಪಂಚಾಯತ್‌ನಲ್ಲಿ ಕಾಂಗ್ರೇಸ್‌ಗೆ ‘ಪಟ್ಟ’

ಪುತ್ತೂರು; ನೂತನವಾಗಿ ಅಸ್ತಿತ್ವಕ್ಕೆ ಬಂದ ಕಡಬ ಪಟ್ಟಣ ಪಂಚಾಯತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಭರ್ಜರಿ ಜಯ ಸಾಧಿಸಿದೆ. ಜಿದ್ದಾಜಿದ್ದಿನ ಹೋರಾಟದಲ್ಲಿ ಬಿಜೆಪಿ ವಿರೋಧ ಪಕ್ಷದ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಒಟ್ಟು ೧೩ ಸ್ಥಾನಗಳ ಪೈಕಿ ೮ ಸ್ಥಾನಗಳನ್ನು ಪಡೆದುಕೊಂಡ ಕಾಂಗ್ರೇಸ್ ಗೆ ಅಧಿಕಾರದ ಪಟ್ಟ ದೊರೆತಿದೆ. ಬಿಜೆಪಿಗೆ ೫ ಸ್ಥಾನಗಳಲ್ಲಿ ಮಾತ್ರ ಗೆಲುವು ಸಿಕ್ಕಿದೆ.
ಕಾಂಗ್ರೇಸ್‌ನಿಂದ ಕಳಾರ ವಾರ್ಡಿನಲ್ಲಿ ಸ್ಪರ್ಧಿಸಿದ್ದ ತಮನ್ನಾ ಜಬೀನ್, ಪನ್ಯ ಕ್ಷೇತ್ರದಲ್ಲಿ ಮಹಮ್ಮದ್ ಪೈಝಲ್ , ಬೆದ್ರಾಜೆ ಕ್ಷೇತ್ರದಲ್ಲಿ ಸೈಮನ್ ಸಿ.ಜೆ, ಮಾಲೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಹನೀಫ್ ಕೆ.ಎಂ, ಕಡಬ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ನೀಲಾವತಿ ಶಿವರಾಮ್, ಪಣೆಮಜಲು ಕ್ಷೇತ್ರದಲ್ಲಿ ರೋಹಿತ್ ಗೌಡ, ಮೂರಾಜೆ ಕ್ಷೇತ್ರದಲ್ಲಿ ಕೃಷ್ಣಪ್ಪ ಪೂಜಾರಿ, ಪುಳಿಕುಕ್ಕು ಕ್ಷೇತ್ರದಲ್ಲಿ ಕೃಷ್ಣ ನಾಯ್ಕ ಅವರು ಗೆಲುವು ಸಾಧಿಸಿದ್ದಾರೆ.
ಬಿಜೆಪಿಯಿಂದ ಕೋಡಿಬೈಲು ವಾರ್ಡಿನಿಂದ ಕುಸುಮ ಅಂಗಡಿಮನೆ, ಪಿಜಕ್ಕಳ ಕ್ಷೇತ್ರದಲ್ಲಿ ದಯಾನಂದ ಗೌಡ ಪಿ, ದೊಡ್ಡಕೊಪ್ಪ ಕ್ಷೇತ್ರದಲ್ಲಿ ಗುಣವತಿ ರಘುರಾಮ, ಕೋಡಿಂಬಾಳ ಕ್ಷೇತ್ರದಲ್ಲಿ ಅಕ್ಷತಾ ಬಾಲಕೃಷ್ಣ ಗೌಡ, ಮಜ್ಜಾರು ಕ್ಷೇತ್ರದಲ್ಲಿ ಮೋಹನ ಅವರಿಗೆ ಗೆಲುವು ಸಿಕ್ಕಿದೆ.
ಆ.೧೭ರಂದು ಪಟ್ಟಣಪಂಚಾಯತ್ ಗೆ ಚುನಾವಣೆ ನಡೆದಿತ್ತು. ಕಾಂಗ್ರೇಸ್, ಬಿಜೆಪಿ ಹಾಗೂ ಎಸ್‌ಡಿಪಿಐ ಸ್ಪರ್ಧಾಕಣದಲ್ಲಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಕೆಲವು ವಾರ್ಡುಗಳಲ್ಲಿ ಮುಸ್ಲಿಂ ಲೀಗ್ ಕೂಡಾ ಸ್ಪರ್ಧೆಗಿಳಿದಿತ್ತು. ಬುಧವಾರ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಿದೆ.
ಬಿಜೆಪಿ ಅಭ್ಯರ್ಥಿಗೆ ‘ಸೊನ್ನೆ’ ಮತ..!
ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಇತಿಹಾಸವೊಂದು ನಿರ್ಮಾಣವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಯೊಬ್ಬರು ಒಂದೇ ಒಂದು ಮತ ಪಡೆಯದಿರುವುದು ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಮುಜುಗರ ತಂದಿದೆ. ವಾರ್ಡ್-೧ರಲ್ಲಿ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾದ ಕಳಾರ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರೇಮಾ ಅವರು ಸ್ಪರ್ಧಿಸಿದ್ದರು. ಕಾಂಗ್ರೇಸ್ ಪಕ್ಷದಿಂದ ತಮನ್ನಾ ಜಬೀನ್ ಸ್ಪರ್ಧಿಸಿದ್ದರು. ಕಾಂಗ್ರೇಸ್ ನಿಂದ ಗಂಡ ಆದಂ ಎಂಬವರಿಗೆ ಮತ್ತೊಂದು ಕಡೆ ಅವಕಾಶ ನೀಡಲಾಗಿದ್ದರೂ ಪತ್ನಿಯಾದ ಜೈನಾಬಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಹಾಗಾಗಿ ಬಿಜೆಪಿಯ ಲೆಕ್ಕಾಚಾರ ಕಾಂಗ್ರೇಸ್ ಮತ ಹಂಚಿಹೋಗುತ್ತದೆ ಎಂದಾಗಿತ್ತು. ಈ ಹಿನ್ನಲೆಯಲ್ಲಿ ಪ್ರೇಮಾ ಅವರನ್ನು ಸ್ಪರ್ಧೆಗಿಳಿಸಿತ್ತು. ಆದರೆ ಪ್ರೇಮಾ ಅವರು ಒಂದು ಮತ ಪಡೆಯಲೂ ಸಾಧ್ಯವಾಗಿಲ್ಲ. ಅವರು ಬೇರೆ ವಾರ್ಡಿನ ನಿವಾಸಿಯಾದ ಹಿನ್ನಲೆಯಲ್ಲಿ ಅವರ ಓಟೂ ಇರಲಿಲ್ಲ..!