ಓದುಗರನ್ನು ಆಕರ್ಷಿಸಿದ ಪ್ರಸಾರಾಂಗ ಪುಸ್ತಕ ಮೇಳ

ಸಂಜೆವಾಣಿ ನ್ಯೂಸ್
ಮೈಸೂರು: ಡಿ.09:-
ವಿಶ್ವಕೋಶ, ಶಬ್ಧಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಗ್ರಂಥಮಾಲೆ, ಕನ್ನಡ ಜಾನಪದ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳ ಪುಸ್ತಕ ಪ್ರಿಯರನ್ನು ಆಕರ್ಷಿಸುತ್ತಿದೆ.


ಮೈಸೂರು ವಿವಿ ಪ್ರಸಾರಾಂಗದ ವತಿಯಿಂದ ಆಯೋಜಿಸಿರುವ ಪ್ರಸಾರಾಂಗ ಪುಸ್ತಕೋತ್ಸವ-2025 ವಿಶೇಷ ರಿಯಾಯಿತಿ ಪುಸ್ತಕ ಮಾರಾಟ ಮೇಳದಲ್ಲಿ ಆಕರ್ಷಕ ರಿಯಾಯಿತಿ ದರದಲ್ಲಿ ಪುಸ್ತಕಗಳು ಮಾರಾಟವಾಗುತ್ತಿದ್ದು, ಸಾಹಿತ್ಯ ಪ್ರಿಯರನ್ನು ಕೈ ಬೀಸಿ ಕರೆಯುತ್ತಿವೆ.


ವಿಶ್ವಕೋಶ, ಶಬ್ಧಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಗ್ರಂಥವಾಲೆ, ಕನ್ನಡ ಜಾನಪದ ಪುಸ್ತಕಗಳು, ಕನ್ನಡ ವಿಶ್ವಕೋಶ, ಪಠ್ಯಕ್ರಮ ಮುಗಿದು ಹೋಗಿರುವ ಹಳೆಯ ಪದವಿ ಪೂರ್ವ ಹಾಗೂ ಪದವಿ ಪಠ್ಯ ಪುಸ್ತಕಗಳು, ಪ್ರಕಟಣೆಗೊಂಡು 40 ವರ್ಷ ಮೀರಿದ ಪ್ರಸಾರಾಂಗದಲ್ಲಿ ಮಾರಾಟವಾಗುವ ಎಲ್ಲ ಪ್ರಕಟಣೆಗಳನ್ನು ಮಾರಾಟ ಮಾಡಲಾಗುತ್ತಿದೆ.


ಪ್ರಾಚ್ಯ ವಿದ್ಯಾ ಸಂಶೋಧನಾಲಯದ ಹಳೆಯ ಪ್ರಕಟಣೆಗಳು, ಕನ್ನಡ ವಿಶ್ವಕೋಶ, ವಿಷಯ ವಿಶ್ವಕೋಶ ಹಾಗೂ ಎಪಿಗ್ರಾಫಿಯ ಕರ್ನಾಟಕದ ಎಲ್ಲ ಸಂಪುಟಗಳು, ಪ್ರಸಾರಾಂಗದ ದಾಸ್ತಾನಿನಲ್ಲಿರುವ ಎಲ್ಲ ಸಾಮಾನ್ಯ ಶೀರ್ಷಿಕೆಯ ಪುಸ್ತಕಗಳು, ಪ್ರಚಾರೋಪನ್ಯಾಸ ಮಾಲೆಯ ಪುಸ್ತಕಗಳು ಲಭ್ಯ ಇದ್ದು, ಶೇ.10ರಿಂದ 75ರಷ್ಟು ರಿಯಾಯಿತಿ ದರದಲ್ಲಿ ದೊರೆಯಲಿವೆ.
ಪ್ರಬುದ್ಧ ಕರ್ನಾಟಕ ತ್ರೈಮಾಸಿಕ ಪತ್ರಿಕೆಯ ಶತಮಾನೋತ್ಸವ ಸಂಚಿಕೆಗೆ ಮಾತ್ರ ಪ್ರಸಾರಾಂಗದಿಂದ ಪ್ರಕಟಗೊಂಡಿರುವ ಹಳೆಯ ನಿಯತಕಾಲಿಕೆಗಳಿಗೆ ವಿಶೇಷ ರಿಯಾಯಿತಿ ದೊರೆಯುತ್ತಿವೆ. ಇದರೊಂದಿಗೆ 870 ಶೀರ್ಷಿಕೆಯ 9 ಲಕ್ಷಕ್ಕೂ ಅಧಿಕ ವೈವಿಧ್ಯ ಪುಸ್ತಕಗಳು ಭಾರೀ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿವೆ.


50 ಸಾವಿರ ರೂ.ಗಳಿಗೆ ಪ್ರಸಾರಾಂಗದ ಎಲ್ಲ ಕೃತಿಗಳನ್ನು ಖರೀದಿಸಬಹುದಾಗಿದ್ದು, ರಿಯಾಯಿತಿ ಮಾರಾಟದಿಂದ 25 ಲಕ್ಷ ರೂ. ವ್ಯಾಪಾರದ ನಿರೀಕ್ಷೆ ಪ್ರಸಾರಾಂಗ ಹೊಂದಿದೆ.
ವಿಶ್ವಕೋಶಕ್ಕೆ ಶೇ.50 ರಿಯಾಯಿತಿ: ಇದೇ ಮೊದಲ ಬಾರಿಗೆ ಕನ್ನಡ ವಿಶ್ವಕೋಶಕ್ಕೆ ಶೇ.50 ರಿಯಾಯಿತಿ ನೀಡಲಾಗಿದೆ. ಇದಕ್ಕೂ ಮುನ್ನ ಶೇ.10, 25ಕ್ಕಿಂತ ಹೆಚ್ಚು ರಿಯಾಯಿತಿ ನೀಡಿರಲಿಲ್ಲ. ಇಂಗ್ಲಿಷ್-ಕನ್ನಡ ನಿಘಂಟು ಶೇ.25, ಪ್ರಚಾರೋಪನ್ಯಾಸ ಮಾಲೆ ಶೇ.10, ಪ್ರಬುದ್ಧ ಕರ್ನಾಟಕ ತ್ರೈವಾಸಿಕ ಪತ್ರಿಕೆಯ ಶತಮಾನೋತ್ಸವ ಸಂಚಿಕೆಗೆ ಶೇ.50 ರಿಯಾಯಿತಿ ನೀಡಲಾಗಿದೆ.


ಪದವಿಪೂರ್ವ, ಪದವಿ ಹಳೆಯ ಪಠ್ಯಪುಸ್ತಕಗಳಿಗೆ ಶೇ.75, 40 ವರ್ಷ ಮೀರಿದ ಪ್ರಸಾರಾಂಗದಲ್ಲಿ ಮಾರಾಟವಾಗುವ ಎಲ್ಲ ಪ್ರಕಟಣೆಗಳಿಗೆ ಶೇ.75, ಪ್ರಾಚ್ಯ ವಿದ್ಯಾಸಂಶೋಧನಾಲಯದ ಹಳೆಯ ಪ್ರಕಟಣೆಗಳಿಗೆ ಶೇ.70, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಳೆಯ ಪ್ರಕಟಣೆಗಳಿಗೆ ಶೇ.60, ಸಾಮಾನ್ಯ ಶೀರ್ಷಿಕೆಯ ಪುಸ್ತಕಗಳಿಗೆ ಶೇ.50 ರಿಯಾಯಿತಿ ಇದೆ.
ಎಲ್ಲಿಯವರೆಗೆ ನಡೆಯಲಿದೆ ಮೇಳ: ಪ್ರಸಾರಾಂಗ ಪುಸ್ತಕೋತ್ಸವ-2025 ವಿಶೇಷ ರಿಯಾಯಿತಿ ಪುಸ್ತಕ ಮಾರಾಟ ಮೇಳವು ಡಿ.31ರವರೆಗೆ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ.