ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ), ಆ.18: ಒಳಮೀಸಲಾತಿ ಕುರಿತು ಆಗಸ್ಟ್ 19ರಂದು ಅಧಿವೇಶನದಲ್ಲಿ
ಸ್ಪಷ್ಟ ನಿರ್ಧಾರ ಕೈಗೊಳ್ಳಲೇಬೇಕು ಎಂದು ಒತ್ತಾಯಿಸಿ ನಾಳೆ ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಹಾಗೂ ಶಾಸಕರ ಮನೆ ಮುಂದೆ ತಮಟೆ ಚಳವಳಿ ನಡೆಸಲಾಗುವುದು ಎಂದು ಕರ್ನಾಟಕ ಮಾದಿಗ ಜಾತಿ–ಉಪಜಾತಿ ಸಂಘಟನೆಗಳ ಒಕ್ಕೂಟ ಹೇಳಿದೆ.
ಒಕ್ಕೂಟದ ಮುಖಂಡ ಬಲ್ಲಾಹುಣ್ಸಿ ರಾಮಣ್ಣ ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಪುಟ ಸಭೆಯಲ್ಲಿ ಮತ್ತೊಂದು ಸಮಿತಿ ರಚಿಸಲು ಮುಂದಾದರೆ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
‘ಒಳಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ವಿಳಂಬ ಧೋರಣೆ ಮುಂದುವರಿಸಿದೆ. ಇದೀಗ ಸಂಪುಟ ಉಪಸಮಿತಿ ರಚಿಸುವ ಹುನ್ನಾರದಲ್ಲಿ ಕೆಲವು ಸಚಿವರು ಸಕ್ರಿಯರಾಗಿದ್ದಾರೆ. ನ್ಯಾ.ನಾಗಮೋಹನ್‌ದಾಸ್ ಆಯೋಗ ರಚಿಸುವುದು ಮಾದಿಗ ಸಮಾಜದ ಬೇಡಿಕೆಯಾಗಿರಲಿಲ್ಲ. ಈಗ ವರದಿಯನ್ನು ಸರ್ಕಾರ ಒಪ್ಪಲೇಬೇಕಾಗುತ್ತದೆ, ಇಲ್ಲದಿದ್ದರೆ ಮಾಧುಸ್ವಾಮಿ ಸಮಿತಿ ಶಿಫಾರಸನ್ನೇ ಜಾರಿಗೆ ತರಬೇಕಾಗುತ್ತದೆ. ಇದರ ಹೊರತು ಸರ್ಕಾರ ಬೇರೆ ಯಾವ ನಿರ್ಧಾರ ಕೈಗೊಂಡರೂ ಮಾದಿಗ ಸಮುದಾಯ ಬೀದಿಗಿಳಿದು ಹೋರಾಟ ನಡೆಸುವುದು ನಿಶ್ಚಿತ’ ಎಂದರು.
‘ಈ ವಿಳಂಬ ಧೋರಣೆಯ ಹಿಂದೆ ಇರುವ ಸಚಿವರೆಂದರೆ ಪ್ರಿಯಾಂಕ್ ಖರ್ಗೆ, ಡಾ.ಜಿ.ಪರಮೇಶ್ವರ ಮತ್ತು ಡಾ.ಮಹದೇವಪ್ಪ. ಸಿಎಂ ಸಿದ್ದರಾಮಯ್ಯ ಅವರು ಈ ಮೂವರು ಸಚಿವರ ಕೈಗೊಂಬೆಯಂತೆ ವರ್ತಿಸುತ್ತಿದ್ದು, ಸ್ವತಂತ್ರವಾಗಿ ಒಂದು ಸಚಿವ ಸಂಪುಟ ಸಭೆ ನಡೆಸುವಷ್ಟೂ ಧೈರ್ಯ, ಹಿಡಿತ ಉಳಿಸಿಕೊಂಡಿಲ್ಲ ಎಂದು ದೂರಿದರು.
ಮುಖಂಡರಾದ ಎ.ಬಸವರಾಜ್, ಎಚ್.ಶೇಷು, ಎಚ್.ಶ್ರೀನಿವಾಸ್, ಹನುಮಂತಪ್ಪ, ವಿಜಯಕುಮಾರ್, ರವಿಕಿರಣ್, ಭರತ್ ಕುಮಾರ್ ಸಿ.ಆರ್. ಮರಿಯಪ್ಪ, ಕರಿಯಪ್ಪ, ನಾಗಭೂಷಣ್ ಇದ್ದರು.

























