Home ಜಿಲ್ಲೆ ಮೈಸೂರು ಒಳ ಮೀಸಲಾತಿ ರಹಿತ ಹಳೆ ಮೀಸಲಾತಿ ಜಾರಿಗೆ ಒತ್ತಾಯ

ಒಳ ಮೀಸಲಾತಿ ರಹಿತ ಹಳೆ ಮೀಸಲಾತಿ ಜಾರಿಗೆ ಒತ್ತಾಯ

ಸಂಜೆವಾಣಿ ವಾರ್ತೆ
ಚಾಮರಾಜನಗರ.ಮಾ.8:-
ಒಳ ಮೀಸಲಾತಿ ಬಗ್ಗೆ ಇರುವ ಗೊಂದಲ, ಸಮಸ್ಯೆಗಳು ಹಾಗೂ ನ್ಯಾಯಾಲಯದ ಅಡೆತಡೆಗಳು ನಿವಾರಣೆಯಾಗುವವರೆಗೆ ಒಳ ಮೀಸಲಾತಿ ರಹಿತ ಹಳೆ ಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಬಲಗೈ ಸಮುದಾಯದ ಮುಖಂಡರಿಂದ ಜಿಲ್ಲೆಯ ಶಾಸಕರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಲಾಯಿತು.


ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ, ಗಡಿಕಟ್ಟೆ ಯಜಮಾನರು, ಹಾಗೂ ಅದಿ ಕರ್ನಾಟಕ ಅಭಿವೃದ್ದಿ ಸಂಘದ ಅಸ್ತಿ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ಹಾಗೂ ಮುಖಂಡರು ಜಿಲ್ಲೆಯ ಶಾಸಕರಾದ ಕೊಳ್ಳೇಗಾಲ ಕ್ಷೇತ್ರದ ಎ.ಆರ್. ಕೃಷ್ಣಮೂರ್ತಿ, ಚಾ.ನಗರ ಕ್ಷೇತ್ರದ ಸಿ. ಪುಟ್ಟರಂಗಶೆಟ್ಟಿ, ಗುಂಡ್ಲುಫೇಟೆ ಕ್ಷೇತ್ರದ ಎಚ್.ಎಂ. ಗಣೇಶಪ್ರಸಾದ್ ಹಾಗೂ ಹನೂರು ಕ್ಷೇತ್ರದ ಮಂಜುನಾಥ್ ಅವರನ್ನು ಅವರ ಕ್ಷೇತ್ರಗಳಲ್ಲಿಯೇ ಭೇಟಿ ಮಾಡಿ ಮನವಿ ಸಲ್ಲಿಸುವ ಮೂಲಕ ಬಲಗೈ ಸಮುದಾಯದ ಪರವಾಗಿ ಧ್ವನಿ ಎತ್ತಬೇಕು. ಸಮದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ವಿಧಾನಸಭಾ ಅಧಿವೇಶದಲ್ಲಿ ಬಲಗೈ ಸಮುದಾಯದ ಪರ ಧ್ವನಿ ತಮ್ಮದಾಗಬೇಕು ಎಂದು ಒತ್ತಾಯಿಸಿದರು.


ಈಗ ಜಾರಿ ಮಾಡಿರುವ ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯದ 101 ಜಾತಿಗಳಿಗೆ ಭಾರಿ ಅನ್ಯಾಯವಾಗಿದ್ದು, ನೇಮಕಾತಿ ಬಿಂದು ಪದ್ದತಿಯಲ್ಲಿ ಭಾರಿ ನ್ಯಾಯವಾಗಿದೆ. ಎ, ಬಿ, ಸಿ ಪ್ರವರ್ಗಗಳಿಗೆ ನಿಗಧಿ ಪಡಿಸುವ ಉದ್ಯೋಗದಲ್ಲಿ ಅನ್ಯಾಯವಾಗುತ್ತದೆ. ವಿವಿಧ ಇಲಾಖೆಯ ಹಾಗೂ ವಿಭಾಗದಲ್ಲಿ ಕಡಿಮೆ ಸಂಖ್ಯೆಯಲ್ಲಿ ಹುದ್ದೆಗಳು ನೇಮಕಾತಿ ನಡೆದಾಗ ಪರಿಶಿಷ್ಟ ಜಾತಿಯಲ್ಲಿಯೇ ಪ್ರವರ್ಗ ಎ ಗೆ ಹೆಚ್ಚು ಹುದ್ದೆಗಳು ಹೋಗುವ ಜೊತೆಗೆ ಇತರೇ ಬಿ ಮತ್ತು ಸಿ ವರ್ಗಗಳಿಗೆ ಅನ್ಯಾಯವಾಗುತ್ತಿದೆ. ಇದರಿಂದ ಸಾಮಾಜಿಕ ನ್ಯಾಯದ ಬದಲಾಗಿ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಅಂಬೇಡ್ಕರ್ ಅವರ ಆಶಯದಂತೆ ಸಮಾನ ಅವಕಾಶಗಳು ದೊರೆಯುವುದಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿ, ಪ್ರತಿಕ್ರಿಯೆ ನೀಡಿದ ಶಾಸಕ ಎ.ಆರ್. ಕೃಷ್ಣಮೂರ್ತಿ, ಒಳ ಮೀಸಲಾತಿ ನೀಡುವಲ್ಲಿ ಆಗಿರುವ ಎಡವಟ್ಟಿನಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಇದನ್ನು ವಿರೋಧಿಸಿ ನಾನು ಒಳ ಮೀಸಲಾತಿ ವರ್ಗೀಕರಣದ ಬಗ್ಗ ಅಪಸ್ವರ ವ್ಯಕ್ತಪಡಿಸಿ, ಅಂದಿನ ಅದಿವೇಶನದಲ್ಲಿ ಸಹಿ ಹಾಕದೇ ಪ್ರತಿಭಟನೆ ವ್ಯಕ್ತಪಡಿಸಿ ಹೊರ ಬಂದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನವನ್ನು ಸೆಳೆದಿದ್ದೇನೆ. ನಿಮ್ಮ ಹೋರಾಟಕ್ಕೆ ನಮ್ಮ ಸಂಫೂರ್ಣ ಬೆಂಬಲ ಇದೆ. ಅಧಿವೇಶನದಲ್ಲಿ ಬಲಗೈ ಸಮುದಾಯದ ಶಾಸಕರು ಒಗ್ಗಟ್ಟಿನಿಂದ ಇದನ್ನು ವಿರೋಧಿಸುವುದಾಗಿ ತಿಳಿಸಿದರು.


ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎಚ್.ಎಂ.ಗಣೇಶ್‍ಪ್ರಸಾದ್, ಎಂ. ಆರ್. ಮಂಜುನಾಥ್ ಅವರು ಮನವಿ ಸ್ವೀಕರಿಸಿಕೊಂಡು ನಿಮ್ಮ ಪರವಾಗಿ ಮಾತನಾಡುವ ಭರವಸೆಯನ್ನು ನೀಡಿದರು.


ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಅಯ್ಯನಪುರ ಶಿವಕುಮಾರ್, ತಾ.ಪಂ. ಮಾಜಿ ಅಧ್ಯಕ್ಷ ಆರ್. ಮಹದೇವ್, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ನಲ್ಲೂರು ಸೋಮೇಶ್ವರ, ನಲ್ಲೂರು ಮಹದೇವಸ್ವಾಮಿ, ನಾಗವಳ್ಳಿ ನಾಗಯ್ಯ, ನಗರಸಭಾ ಮಾಜಿ ಸದಸ್ಯ ಆರ್.ಪಿ. ನಂಜುಂಡಸ್ವಾಮಿ, ಡಿ. ನಾರಾಯಣಸ್ವಾಮಿ, ಯ.ಹೊಂಗನೂರು ವೀರಣ್ಣ, sಸೋಮಣ್ಣ, ಮಲ್ಲೇದೇವರು, ಸಿದ್ದಯ್ಯನಪುರ ಗೋವಿಂದರಾಜು, ಚನ್ನಂಜಯ್ಯ, ದಡದಹಳ್ಳಿ ಗೋವಿಂದರಾಜು, ಹೊಸಹಳ್ಳಿ ಮಧುಸೂದನ್, ರಂಗಸ್ವಾಮಿ, ಮೊದಲಾದವರು ಇದ್ದರು.