ಒಕ್ಕಲಿಗ ಸಮಾಜವನ್ನು ಸವಲತ್ತುಗಳಿಂದ ತಪ್ಪಿಸಲಾಗುತ್ತಿದೆ: ಕುಮಾರ್ ಗೌಡ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ನ.10
: ಕೃಷಿಯನ್ನೆ ನಂಬಿ ಬದುಕುತ್ತಿರುವ ಒಕ್ಕಲಿಗ ಸಮುದಾಯ ಆರ್ಥಿಕವಾಗಿ ಅತ್ಯಂತ ಹಿಂದುಳಿದಿದೆ. ಆದರೂ ಒಕ್ಕಲಿಗ ಸಮುದಾಯವನ್ನು ಪ್ರಭಲ ಜಾತಿ ಎಂದು ಬಿಂಬಿಸುವ ಮೂಲಕ ಎಲ್ಲ ಬಗೆಯ ಸಾಮಾಜಿಕ ಸವಲತ್ತುಗಳಿಂದ ತಪ್ಪಿಸಲಾಗುತ್ತಿದೆ. ರಾಜ್ಯ ಸರ್ಕಾರ ಒಕ್ಕಲಿಗ ಸಮುದಾಯವನ್ನು ಅತ್ಯಂತ ಹಿಂದುಳಿದ ಸಮುದಾಯ ಎಂದು ಪರಿಗಣಿಸಿ ಪರಿಶಿಷ್ಠ ಜಾತಿ ವರ್ಗಗಳಿಗೆ ನೀಡುತ್ತಿರುವ ಮಾದರಿಯಲ್ಲಿಯೇ ವಿಶೇಷ ಸವಲತ್ತುಗಳನ್ನು ನೀಡುವಂತೆ ತಾಲೂಕು ಒಕ್ಕಲಿಗರ ವೇದಿಕೆ ಅಧ್ಯಕ್ಷ ವಳಗೆರೆ ಮೆಣಸ ವಿ.ಎಂ.ಕುಮಾರ ಗೌಡ ಆಗ್ರಹಿಸಿದರು.


ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ರಂಗನಾಥಪುರ ಕ್ರಾಸ್ ನಲ್ಲಿ ಹೋಬಳಿ ಮಟ್ಟದ ಒಕ್ಕಲಿಗರ ವೇದಿಕೆಯ ಸಭೆ ನಡೆಸಿ ಅವರು ಮಾತನಾಡಿದರು.
ಒಕ್ಕಲಿಗರು ಶೇ.100 ರಷ್ಟು ಕೃಷಿಕರು. ಭೂಮಿಯನ್ನು ನಂಬಿ ನಾಡಿಗೆ ಅನ್ನ ಬೆಳೆಯುತ್ತಿರುವ ಒಕ್ಕಲಿಗರು ಇಂದು ತೀವ್ರವಾದ ಆರ್ಥಿಕ ಸಂಕಷ್ಠದಲ್ಲಿದ್ದಾರೆ. ಒಕ್ಕಲಿಗರು ಬೆಳೆದ ಬೆಳೆಗಳಿಗೆ ವ್ಶೆಜ್ಞಾನಿಕ ಬೆಲೆಯಿಲ್ಲ. ಪ್ರಾಕೃತಿಕ ವಿಕೋಪಗಳು ಮತ್ತಿತರ ಕಾರಣಗಳಿಂದ ಬೆಳೆ ನಷ್ಠಕ್ಕೊಳಗಾದ ರೈತ ಸಮುದಾಯಕ್ಕೆ ರಾಜ್ಯ ಸರ್ಕಾರ ವ್ಶೆಜ್ಞಾನಿಕ ಪರಿಹಾರ ನೀಡುತ್ತಿಲ್ಲ. ಸರ್ಕಾರದ ಯೋಜನೆಗಳಿಗಾಗಿ ಭೂ ಸ್ವಾಧೀನ ಮಾಡಿಕೊಂಡರೆ ಭೂಮಿ ಕಳೆದುಕೊಂಡ ರೈತರಿಗೆ ವ್ಶೆಜ್ಞಾನಿಕ ಪರಿಹಾರ ನೀಡುತ್ತಿಲ್ಲ. ರಾಜ್ಯದ ಶೇ.90 ರಷ್ಟು ಒಕ್ಕಲಿಗರು ಸಣ್ಣ ಸಣ್ಣ ಹಿಡುವಳಿದಾರರಾಗಿದ್ದು ಇಂದು ಭೂಮಿಯನ್ನೆ ನಂಬಿ ಬದುಕಲಾರದ ಪರಿಸ್ಥಿತಿಯಲ್ಲಿ ಒಕ್ಕಲಿಗ ಜನಾಂಗವಿದೆ. ಬೆಳಗಾಗೆದ್ದು ಭೂಮಿ ತಾಯಿಯ ಮಡಿಲಲ್ಲಿ ಬೆವರು ಹರಿಸುವ ಒಕ್ಕಲಿಗರು ಅಸಂಘಟಿತರಾಗಿದ್ದು ಇತರ ಸಮುದಾಯಗಳಂತೆ ಸರ್ಕಾರದ ಸವಲತ್ತುಗಳಿಗಾಗಿ ಬೀದಿ ಹೋರಾಟ ನಡೆಸುತ್ತಿಲ್ಲ.


ಅಹಿಂದ ಮತಗಳ ಬೆನ್ನು ಬಿದ್ದಿರುವ ಒಕ್ಕಲಿಗ ರಾಜಕಾರಣಿಗಳು ಒಕ್ಕಲಿಗರ ಹಿತಾಸಕ್ತಿಗಳಿಗಾಗಿ ಪೂರಕವಾಗಿ ಸದನದ ಒಳಗೆ ಮತ್ತು ಹೊರಗೆ ಗಟ್ಟಿ ಧ್ವನಿ ಎತ್ತುತ್ತಿಲ್ಲ. ಒಕ್ಕಲಿಗರು ತಮ್ಮ ಮುಂದಿನ ಪೀಳಿಗೆಯ ಭವಿಷ್ಯ ನಿರ್ಮಾಣಕ್ಕಾಗಿ ಸಂವಿಧಾನ ಬದ್ದವಾದ ಸವಲತ್ತುಗಳನ್ನು ಪಡೆದುಕೊಳ್ಳಲು ಸಂಘಟಿತರಾಗಬೇಕಾಗಿದೆ. ಇದಕ್ಕಾಗಿ ಒಕ್ಕಲಿಗರ ಹೋರಾಟ ಸೇನೆಯನ್ನು ಕಟ್ಟಿ ಬೆಳೆಸಬೇಕಾದ ಅಗತ್ಯವಿದೆ. ನಮ್ಮ ಹೋರಾಟ ಯಾವುದೇ ಸಮುದಾಯದ ವಿರುದ್ದ ಅಲ್ಲ.


ಬದಲಾಗಿ ಒಕ್ಕಲಿಗ ಸಮುದಾಯದ ಸಂರಕ್ಷಣೆಗಾಗಿ ಎನ್ನುವ ನೀತಿಯಡಿ ಒಕ್ಕಲಿಗ ಸಮುದಾಯವನ್ನು ಸಂಘಟಿಸಬೇಕಾದ ಅವಶ್ಯಕತೆಯಿದೆ. ಇದಕ್ಕಾಗಿ ತಾಲೂಕಿನಲ್ಲಿ ಒಕ್ಕಲಿಗರ ಜಾಗೃತಿ ವೇದಿಕೆಯನ್ನು ಅಸ್ತಿತ್ವಕ್ಕೆ ತಂದಿದ್ದು ಹೋಬಳಿ ಮಟ್ಟದಲ್ಲಿ ಸಮುದಾಯ ಸಂಘಟನೆಗಾಗಿ ಸಭೆಗಳನ್ನು ನಡೆಸಲಾಗುತ್ತಿದೆ.


ತಾಲೂಕಿನ ಎಲ್ಲಾ ಹೋಬಳಿಗಳಲ್ಲೂ ಸಮುದಾಯದ ಸಭೆ ನಡೆಸಿ ಒಕ್ಕಲಿಗರ ಹೋರಾಟದ ವೇದಿಕೆಗೆ ಒಂದು ಸ್ಪಷ್ಟ ರೂಪ ನೀಡಲಾಗುವುದು. ಈ ಬಗ್ಗೆ ವೇದಿಕೆಯ ಸದಸ್ಯರು ಈಗಾಗಲೇ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಡಾ.ನಿರ್ಮಲಾನಂದನಾಥ ಶ್ರೀಗಳು ಮತ್ತು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿಗಳಾದ ಡಾ.ನಿಶ್ಚಲಾನಂದನಾಥ ಶ್ರೀಗಳ ಜೊತೆ ಚರ್ಚಿಸಲಾಗಿದ್ದು ವೇದಿಕೆಗೆ ಒಂದು ಸ್ಪಷ್ಟ ರೂಪ ನೀಡಿದ ಅನಂತರ ಒಕ್ಕಲಿಗರ ಹೋರಾಟದ ವೇದಿಕೆಯ ಸದಸ್ಯರಿಗೆ ತಮ್ಮದೇ ಆದ ಭಾವುಟ ಮತ್ತು ಸಂಕೇತ ಸೂಚಕ ಟವಲ್ ಗುರುತಿಸಿ ಸಂಘಟನೆಯನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸಲಾಗುವುದೆಂದು ಎಂದು ತಿಳಿಸಿದ ಕುಮಾರಗೌಡ ಸಮುದಾಯದ ಜನ ಪಕ್ಷ ರಾಜಕಾರಣವನ್ನು ಬದಿಗಿಟ್ಟು ಸಮುದಾಯ ಸಂಘಟನೆಯ ಕಾರ್ಯಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.


ತಾಲೂಕು ಪಂಚಾಯತಿ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್ ಮಾತನಾಡಿ ಸಮುದಾಯದ ಹಿತದೃಷ್ಠಿಯಿಂದ ಇಂದು ಒಕ್ಕಲಿಗರ ಹೋರಾಟದ ವೇದಿಕೆಯ ಅಗತ್ಯವಿದೆ. ದೇಶದ ಎಲ್ಲಾ ಜಾತಿ ಸಮುದಾಯಗಳು ಇಂದು ಸಂಘಟಿತರಾಗಿ ತಮ್ಮ ಹಕ್ಕು ಮತ್ತು ಸವಲತ್ತುಗಳಿಗಾಗಿ ಹೋರಾಟದ ಮಾರ್ಗವಿಡಿದಿವೆ. ಒಕ್ಕಲಿಗರು ಸಂಘಟನೆ ಮತ್ತು ಹೋರಾಟದಲ್ಲಿ ಹಿಂದೆ ಬಿದ್ದರೆ ಸಮುದಾಯದ ಮುಂದಿನ ಪೀಳಿಗೆಗೆ ಅನ್ಯಾಯವಾಗಲಿದೆ. ಇತರ ಸಮುದಾಯಗಳ ರಾಜಕಾರಣಿಗಳಂತೆ ಒಕ್ಕಲಿಗ ರಾಜಕಾರಣಿಗಳೂ ಸಮುದಾಯಕ್ಕೆ ಹಿತಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎನ್ನುವ ಒತ್ತಡ ನಮ್ಮ ರಾಜಕಾರಣಿಗಳ ಮೇಲೆ ಬೀಳಬೇಕಾದರೆ ಒಕ್ಕಲಿಗ ಸಮುದಾಯ ಸಂಘಟಿತ ಹೋರಾಟದ ಶಕ್ತಿಯಾಗಿ ರೂಪುಗೊಳ್ಳಬೇಕಾದ ಅವಶ್ಯಕತೆಯಿದೆ ಎಂದರು.


ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಎ.ಬಿ.ಕುಮಾರ್, ಮುಖಂಡರುಗಳಾದ ಲೋಕೇಶ್, ಮಹದೇವೇಗೌಡ, ಕಿರಣ್‍ಕುಮಾರ್, ಮಹದೇವೇಗೌಡ, ಬಿಜೆಪಿ ಮುಖಂಡ ಭಾರತೀಪುರ ಪುಟ್ಟಣ್ಣ, ದಿವಾಕರ್, ಸ್ವಾಮೀಗೌಡ, ಕೋಟಹಳ್ಳಿ ಶ್ರೀನಿವಾಸ್ ಸೇರಿದಂತೆ ಹಲವರಿದ್ದು ಮಾತನಾಡಿದರು.