ಐಸಿಎಆರ್- ಐಐಹೆಚ್‌ಆರ್ ವತಿಯಿಂದ ಸುಳ್ಯ ತಾಲೂಕಿನ ಬುಡಕಟ್ಟು ರೈತರಿಗೆ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ

ಸುಳ್ಯ:ಅಡಿಕೆ ಬೆಳೆಗೆ ಪರ್ಯಾಯ ಬೆಳೆಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ, ಐಸಿಎಆರ್ – ಐಐಹೆಚ್‌ಆರ್ ಸಂಸ್ಥೆಯು ಐಸಿಎಆರ್ – ಕೆವಿಕೆ ಸಹಯೋಗದಲ್ಲಿ ಸುಳ್ಯ ತಾಲೂಕಿನ ಬುಡಕಟ್ಟು ರೈತರಿಗೆ ಹೈ-ಟೆಕ್ ತೋಟಗಾರಿಕೆ ಕುರಿತ ಎರಡು ದಿನಗಳ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ ಬುಡಕಟ್ಟು ಉಪ ಯೋಜನೆಯ ಅನುದಾನದಡಿ ಸಂಪಾಜೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಐಸಿಎಆರ್- ಐಐಹೆಚ್‌ಆರ್ ಕೇಂದ್ರದ ಪ್ರಭಾರ ನಿರ್ದೇಶಕ ಡಾ.ಪ್ರಕಾಶ್ ಪಾಟೀಲ್ ಉದ್ಘಾಟಿಸಿ ರೈತರು ತಾವು ಮಾಡುವ ಕೃಷಿಯಲ್ಲಿನ ಉತ್ಪಾದನೆ ಮತ್ತು ಆದಾಯ ಹೆಚ್ಚಿಸಲು ಸಂಸ್ಥೆ ಆಭಿವೃದ್ದಿ ಪಡಿಸಿದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ಪ್ರಧಾನ ವಿಜ್ಞಾನಿಗಳಾದ ಡಾ. ಟಿ. ಎಚ್. ಸಿಂಗ್, ಡಾ. ವಿ. ಶಂಕರ್ ತರಬೇತಿಯ ನೇತೃತ್ವ ವಹಿಸಿದ್ದರು. ಸಾಮಾಜಿಕ ವಿಜ್ಞಾನ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ಡಾ. ಸೆಂತಿಲ್ ಕುಮಾರ್ ಅವರು ತರಕಾರಿ ಬೆಳೆಗಳಲ್ಲಿ ಅರ್ಕ ಮೈಕ್ರೋಬಿಯಲ್ ಕಾಂಸಾರ್ಟಿಯಾ ಬಳಕೆಯ ವಿಧಾನವನ್ನು ಪ್ರದರ್ಶಿಸಿದರು.
ಸಾಮಾಜಿಕ ವಿಜ್ಞಾನ ಮತ್ತು ತರಬೇತಿ ವಿಭಾಗದ ನಿವೃತ್ತ ಪ್ರಧಾನ ವಿಜ್ಞಾನಿ ಡಾ. ವಿ.ಕೆ.ಜೆ. ರಾವ್ ವಿಸ್ತರಣೆ ಕೃಷಿ ಉದ್ಯಮ ಕುರಿತು ಉಪನ್ಯಾಸ ನೀಡಿದರು. ನಿವೃತ್ತ ವಿಜ್ಞಾನಿ ಡಾ. ಜಿ. ನಾರಾಯಣ ಅವರು ಉತ್ಪಾದನೆ ಹಾಗೂ ಉತ್ಪಾದಕತೆ ಸುಧಾರಣೆಗೆ ವೈಜ್ಞಾನಿಕ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು. ಹಿರಿಯ ವಿಜ್ಞಾನಿ ಡಾ.ಚೇತನ್ ಕುಮಾರ್ ಮಣ್ಣಿನ ಮಾದರಿ ಸಂಗ್ರಹಣೆ ಬಗ್ಗೆ ಮಾಹಿತಿ ನೀಡಿ, ಮಣ್ಣಿನ ಪರೀಕ್ಷೆ ಆಧಾರಿತ ರಸಗೊಬ್ಬರ ಬಳಕೆ ಮಾಡುವಂತೆ ತಿಳಿಸಿದರು.
ವಿಜ್ಞಾನಿ ಡಾ.ವಿ.ಶಂಕರ್ ಅವರು ಕರಾವಳಿ ಕರ್ನಾಟಕಕ್ಕೆ ಸೂಕ್ತ ತರಕಾರಿ ಬೆಳೆಯ ಕುರಿತು ಮಾಹಿತಿ ನೀಡಿದರು. ಪ್ರಧಾನ ವಿಜ್ಞಾನಿ ಡಾ.ರೀನಾ ರೋಸಿ ಥಾಮಸ್ ತಂತ್ರಜ್ಞಾನ, ಬೆಳೆಗಳು ಹಾಗೂ ಸುಧಾರಿತ ಪದ್ಧತಿಗಳ ಮಾಹಿತಿಗಾಗಿ ಸಂಸ್ಥೆ ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರದರ್ಶಿಸಿ ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ನಡೆದ ತರಬೇತಿಯಲ್ಲಿ ಸುಳ್ಯ ತಾಲೂಕಿನ ಆರು ಗ್ರಾಮ ಪಂಚಾಯಿತಿಗಳಿಂದ ಆಯ್ಕೆಯಾದ ಬುಡಕಟ್ಟು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅವರಿಗೆ ಪ್ರಮಾಣಪತ್ರ, ಬೀಜ ಕಿಟ್, ಜೈವಿಕ ಗೊಬ್ಬರ, ಜೈವಿಕ ಕೀಟನಾಶಕ, ಸೂಕ್ಷ್ಮ ಪೋಷಕಾಂಶ ಮಿಶ್ರಣ, ತರಕಾರಿ ಸ್ಪೆಷಲ್ ಹಾಗೂ ತಾಂತ್ರಿಕ ಕೈಪಿಡಿ ವಿತರಿಸಲಾಯಿತು. ಸುಳ್ಯ ತಾಲೂಕಿನ ಕೃಷಿ ಸಖಿ ಮೋಹಿನಿ ವಿಶ್ವನಾಥ್ ಸಂಪಾಜೆ, ಲೋಚನಾ ಆಲೆಟ್ಟಿ, ಡಾ. ಐಸಿಎಆರ್ – ಕೆವಿಕೆ ಕೇಂದ್ರದ ಹಿರಿಯ ವಿಜ್ಞಾನಿ ಟಿ. ಜೆ. ರಮೇಶ ಮತ್ತಿತರರು ಉಪಸ್ಥಿತರಿದ್ದರು.