
ಸಂಜೆವಾಣಿ ನ್ಯೂಸ್
ಮೈಸೂರು: ಜು.05:- ಮೈಸೂರು ವಲಯ ರಾಜ್ಯದ ಮಾಹಿತಿ ತಂತ್ರಜ್ಞಾನ (ಐಟಿ) ರಫ್ತಿನಲ್ಲಿ ಕಳೆದ ಹಣಕಾಸು ವರ್ಷದಲ್ಲಿ 5,700 ಕೋಟಿ ರೂಪಾಯಿ ವಹಿವಾಟು ನಡೆಸಿದೆ ಎಂದು ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ನಗರದ ಇನ್ಫೊಸಿಸ್ ಕ್ಯಾಂಪಸ್ಸಿನ ಎಂ.ಜಿ.ಸಭಾಂಗಣದಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸೋಮವಾರ ಆಯೋಜಿಸಿದ್ದ ಬಿಗ್ ಟೇಕ್ ಷೋ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ವರ್ಚ್ಯುವಲ್ ಮೂಲಕ ಮಾತನಾಡಿದರು. ರಫ್ತು ಆರ್ಥಿಕತೆಯಲ್ಲಿ ಮೈಸೂರು ವಲಯ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ರಾಜ್ಯದ ಸಾಂಸ್ಕೃತಿಕ ರಾಜಧಾನಿಯಷ್ಟೇ ಅಲ್ಲದೇ ಭವಿಷ್ಯದಲ್ಲಿ ದೇಶದ ಅತ್ಯುತ್ತಮ ತಂತ್ರಜ್ಞಾನದ ಭೂಸ್ವರೂಪವಾಗಿ ಬದಲಾಗಲಿದೆ. ಹೀಗಾಗಿ ಮೈಸೂರು ಕ್ಲಸ್ಟರಿನ ಸಮಗ್ರ ಅಭಿವೃದ್ಧಿಗೆ ಸರ್ಕಾರ ಪಣ ತೊಟ್ಟಿದೆ ಎಂದರು.
ಕಳೆದ ಆರ್ಥಿಕ ವರ್ಷದಲ್ಲಿ ಮೈಸೂರು ಕ್ಲಸ್ಟರ್ ವ್ಯಾಪ್ತಿಗೆ ಒಳಪಡುವ ಮೈಸೂರು, ಮಂಡ್ಯ, ರಾಮನಗರ ಹಾಗೂ ಚಾಮರಾಜನಗರದಲ್ಲಿ 47 ಹೊಸ ಕಂಪನಿಗಳು ಹೂಡಿಕೆ ಮಾಡಿದ್ದು, 4,500 ಮಂದಿಗೆ ನೇರ ಉದ್ಯೋಗ ಸೃಷ್ಟಿಯಾಗಿದೆ. ಐ.ಟಿ- ಬಿ.ಟಿ ಅಲ್ಲದೇ ನವೋದ್ಯಮಗಳ ಸ್ಥಾಪನೆಗೆ ಇಲ್ಲಿ ಪೂರಕವಾದ ವಾತಾವರಣವಿರುವುದರಿಂದ 450 ಹೊಸ ನವೋದ್ಯಮ( ಸ್ಟಾರ್ಟ್‍ಅಪ್)ಗಳು ಕಾರ್ಯಾಚರಣೆ ಆರಂಭಿಸಿವೆ. ಇವುಗಳಲ್ಲಿ ಡೀಪ್ ಟೆಕ್, ರಕ್ಷಣೆ (ಡಿಫೆನ್‍ಸ್) ಹಾಗೂ ಸೇವಾಧರಿತ ಕಂಪನಿಗಳು ಹೆಚ್ಚಾಗಿ ಇವೆ. ರಾಜ್ಯದ ಶೇ.15ರಷ್ಟು ನವೋದ್ಯಮಗಳು ಮೈಸೂರಿನಲ್ಲಿ ಕಾರ್ಯಾಚರಣೆ ಮಾಡುತ್ತಿವೆ ಎಂದು ತಿಳಿಸಿದರು.
ಇನ್ಫೊಸಿಸ್, ವಿಪೆÇ್ರ, ಐಬಿಎಂ, ಎಚ್‍ಪಿ ಸೇರಿದಂತೆ ವಿವಿಧ ದೈತ್ಯ ಕಂಪನಿಗಳು ಮೈಸೂರನ್ನು ಉದ್ಯಮದ ವಿಸ್ತರಣೆಗೆ ಪರ್ಯಾಯ ಸ್ಥಳವೆಂದು ಮಾತ್ರವೇ ಗುರುತಿಸಿಲ್ಲ. ಸಂಶೋಧನೆ ಹಾಗೂ ವಿಸ್ತರಣೆಗೆ ಪ್ರಶಸ್ತ ಜಾಗವೆಂದು ಗುರುತಿಸಿವೆ. ಬಿಯಾಂಡ್ ಬೆಂಗಳೂರು ಅಭಿಯಾನದಡಿ ಮೈಸೂರು ಕ್ಲಸ್ಟರ್ ಅನ್ನು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ಸರ್ಕಾರ ಬದ್ಧವಾಗಿದೆ ಎಂದರು.
ಬೆಂಗಳೂರು ನಂತರ ತಂತ್ರಜ್ಞಾನ ಕಂಪನಿಗಳು ಉದ್ಯಮ ಸ್ಥಾಪಿಸಲು ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿಯಲ್ಲಿ ಪೂರಕ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಒಂದೂವರೆ ಗಂಟೆಯಲ್ಲಿ ತಲುಪಬಹುದು. ಮಂಡಕಳ್ಳಿ ವಿಮಾನದ ಬಳಿ ಜಾಗತಿಕ ತಾಂತ್ರಿಕ ಕೇಂದ್ರವನ್ನು (ಜಿಟಿಸಿ) ಅನ್ನು ರಾಜ್ಯ ಸರ್ಕಾರ ನಿರ್ಮಿಸುತ್ತಿದೆ ಎಂದು ಮಾಹಿತಿ ನೀಡಿದರು.
ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್, ಫ್ರಾನ್ಸಿನ ರಾಯಭಾರಿ ಮಾರ್ಕ್ ಲ್ಯಾಮಿ, ಭಾರತೀಯ ಮಾಹಿತಿ ತಂತ್ರಜ್ಞಾನ ಪಾರ್ಕ್ ನಿರ್ದೇಶಕ ಸಂಜಯ್ ತ್ಯಾಗಿ, ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು, ಸಿಇಒ ಸಂಜೀವ್ ಗುಪ್ತಾ, ಮೈಸೂರು ಕ್ಲಸ್ಟರ್ ಮುಖ್ಯಸ್ಥ ಜಿ.ಎನ್.ಸುಧೀರ್, ಎಕ್ಸೆಲ್ ಸಾಫ್‍ಟ್ ಮುಖ್ಯಸ್ಥ ಸುಧನ್ವ ಧನಂಜಯ, ಇನ್ಫೊಸಿಸ್ ಉಪಾಧ್ಯಕ್ಷ ವಿನಾಯಕ ಹೆಗಡೆ, ರಂಗಸನ್‍ಸ್ ಏರೊಸ್ಪೇಸ್ ವ್ಯವಸ್ಥಾಪಕ ನಿರ್ದೇಶಕ ಪವನ್ ರಂಗ, ಟಿಐಇ ಮೈಸೂರು ಅಧ್ಯಕ್ಷ ಭಾಸ್ಕರ್ ಕಳಲೆ ವೇದಿಕೆಯಲ್ಲಿ ಇದ್ದರು.