
ಪುತ್ತೂರು: ಯುವ ಪೊಲೀಸ್ ಅಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಮಕ್ಕಳಿಗಾಗಿ ಆಯೋಜನೆಗೊಂಡ ಐಎಎಸ್ ಐಪಿಎಸ್ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ ಉತ್ತಮವಾದ ಪ್ರಯತ್ನವಾಗಿದೆ. ಬಹಳಷ್ಟು ಮಂದಿ ಈ ಬಗ್ಗೆ ಅರಿವನ್ನು ಹೊಂದಿರುವುದಿಲ್ಲ. ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಈ ಸ್ಪರ್ಧಾತ್ಮಕ ಪರೀಕ್ಷೆಯ ಕಾರ್ಯಾಗಾರವನ್ನು ಹಮ್ಮಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಹೆಚ್ಚು ಮಂದಿ ಐಪಿಎಸ್ ಐಎಎಸ್ ಅಧಿಕಾರಿಗಳನ್ನು ಸೃಷ್ಟಿಸುವಲ್ಲಿ ಅನುಕೂಲಕರವಾಗಿದೆ ಎಂದು ಪುತ್ತೂರು ನಗರಠಾಣಾ ಇನ್ಸ್‌ಪೆಕ್ಟರ್ ಜಾನ್ಸನ್ ಕಿರಣ್ ಡಿಸೋಜ ಅಭಿಪ್ರಾಯಪಟ್ಟರು.
ಪುತ್ತೂರಿನ ಸಂಚಾರಿ ಪೊಲೀಸ್ ಠಾಣೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ ಸಹಕಾರದಲ್ಲಿ ನಡೆದ ಐಎಎಸ್-ಐಪಿಎಸ್ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನಗರಠಾಣೆಯ ಸಬ್ ಇನ್ಸ್‌ಪೆಕ್ಟರ್ ಚಕ್ರಪಾಣಿ ಅವರು ಮಾತನಾಡಿ, ಈ ರೀತಿಯ ಕಾರ್ಯಾಗಾರಗಳನ್ನು ಯುವಪೀಳಿಗೆಯಲ್ಲಿ ಚೈತನ್ಯವನ್ನು ಪ್ರೇರೇಪಿಸುತ್ತವೆ. ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಯುವ ಸಿಬಂದಿಗಳಿಗೆ ಅತ್ಯಂತ ಉಪಯುಕ್ತ ಎಂದರು.
ರೋಟರಿಯುವ ಅಧ್ಯಕ್ಷ ಕುಸುಮರಾಜ್ ಅವರು ಮಾತನಾಡಿ, ಪೊಲೀಸ್ ಸಿಬ್ಬಂದಿಗಳಿಗಾಗಿ ಐಎಎಸ್- ಐಪಿಎಸ್ ಪರೀಕ್ಷೆಗಳ ಕಾರ್ಯಗಾರ ಸಾಹಿತ್ಯ ಪರಿಷತ್ ವತಿಯಿಂದ ನಡೆದಿರುವುದು ರಾಜ್ಯದಲ್ಲೇ ಪ್ರಥಮ ಎಂದರು. ರೋಟರಿ ಕ್ಲಬ್ ಪುತ್ತೂರು ಯುವ ನಿಯೋಜಿತ ಅಧ್ಯಕ್ಷೆ ವಚನ ಜಯರಾಮ್ ಅವರು ಮಾತನಾಡಿ ಪೊಲೀಸ್ ಸಿಬ್ಬಂದಿಗಳು ತಮ್ಮ ಸೇವಾ ಅವಧಿಯಲ್ಲಿಯೇ ಉನ್ನತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಮೂಲಕ ಆಡಳಿತ ಕ್ಷೇತ್ರದಲ್ಲಿಯೂ ಸಾಧನೆ ಮಾಡಲು ಸಾಧ್ಯವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಐಎಎಸ್ ದರ್ಶನ್ ಇದರ ಮುಖ್ಯಸ್ಥ ದರ್ಶನ್ ಗರ್ತಿಕೆರೆ ಅವರು ಐಎಎಸ್, ಐಪಿಎಸ್ ಸೇರಿದಂತೆ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ವಿಧಾನ, ಅಧ್ಯಯನ ರೂಪರೇಖೆ, ಸಮಯ ನಿರ್ವಹಣೆ, ಹಾಗೂ ಯಶಸ್ಸಿನ ಮಂತ್ರಗಳ ಕುರಿತು ಅವರು ವಿವರಿಸಿದರು. ಐಎಎಸ್ ಐಪಿಎಸ್ ಪರೀಕ್ಷೆ ಬರೆಯಲು ಆಸಕ್ತಿ ಇರುವ ಪೊಲೀಸ್ ಸಿಬ್ಬಂದಿಗಳಿಗೆ ಉಚಿತ ತರಬೇತಿ ಹಾಗೂ ಮಾರ್ಗದರ್ಶನ ನೀಡುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ದರ್ಶನ್ ಗರ್ತಿಕೆರೆ ಹಾಗೂ ಸಂಚಾರಿ ಠಾಣೆಯ ಸಬ್ ಇನ್ಸ್ ಪೆಕ್ಟರ್ ಚಕ್ರಪಾಣಿ ಅವರನ್ನು ಸನ್ಮಾನಿಸಲಾಯಿತು. ಪೊಲೀಸ್ ಇಲಾಖೆಯ ದಿನೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಕಾರ್ಯದರ್ಶಿ ಅಭಿಶ್ ವಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕಾಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ರೋಟರಿಯ ಅಶ್ವಿನಿ ಕೃಷ್ಣ ಮುಳಿಯ, ಡಾ.ಚೇತನ್ ಪ್ರಕಾಶ್, ಡಾ.ಹರ್ಷಕುಮಾರ್ ರೈ ಹಾಗೂ ನರಸಿಂಹ ಪೈ ಉಪಸ್ಥಿತರಿದ್ದರು.

























