ಏಷ್ಯಾ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನತ್ತ ‘ಶಮಿಕಾ’ ಹೆಜ್ಜೆ; ೨೪ ಗಂಟೆ ಕಣ್ಣುಮುಚ್ಚಿ ‘ಮರಳುಚಿತ್ರ ರಚನೆ

ಪುತ್ತೂರು: ಕೊರೊನಾ ಲಾಕ್‌ಡೌನ್ ಸಂದರ್ಭ ಬಹುತೇಕ ಮಕ್ಕಳು ಆಟದತ್ತ ಮನ ಮಾಡಿದ್ದರೆ, ಈ ಹುಡುಗಿ ಮಾತ್ರ ಆನ್‌ಲೈನ್ ಮೂಲಕ ಗಾಂಧಾರಿ ವಿದ್ಯೆ ಅಭ್ಯಾಸ ಮಾಡುತ್ತಿದ್ದಳು.
ಇದೇ ವಿದ್ಯೆಯನ್ನು ಸತತವಾಗಿ ಅಭ್ಯಾಸ ಮಾಡಿ ಇದೀಗ ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ೨೪ ಗಂಟೆಗಳ ಕಾಲ ಸ್ಯಾಂಡ್ ಆರ್ಟ್ ಮೂಲಕ ಏಷ್ಯಾ ಗೋಲ್ಡನ್ ಬುಕ್ ಆಫ್ ರೆಕಾಡ್ ನಲ್ಲಿ ತನ್ನ ಸಾಧನೆಯನ್ನು ದಾಖಲಿಸಲು ಮುಂದಾಗಿದ್ದಾಳೆ.
ಮೂಡಿಗೆರೆಯ ಸತೀಶ್ ಪದ್ಮನಾಭ್ ಅವರಿಂದ ಆನ್‌ಲೈನ್ ಮೂಲಕ ಕಲಿತುಕೊಂಡ ಈ ವಿದ್ಯೆ ಜತೆಗೆ ತನ್ನ ಪರಿಶ್ರಮವನ್ನೂ ಸೇರಿಸಿಕೊಂಡು ಇದೀಗ ತನ್ನದೇ ಆದ ಸಾಧನೆಯನ್ನು ಮಾಡ ಹೊರಟ ಉಪ್ಪಿನಂಗಡಿ ಬಳಿಯ ಹಿರೇಬಂಡಾಡಿ ಗ್ರಾಮದ ಕೇಶವ ಪಿ.ಎಂ ಅವರ ಪುತ್ರಿ ಶಮಿಕಾ ಎಂ.ಕೆ. ಪ್ರಸ್ತುತ ಇಂದ್ರಪ್ರಸ್ಥ ವಿದ್ಯಾಸಂಸ್ಥೆಯ ೯ ನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆ ಡಿ.೬ ಮತ್ತು ೭ರಂದು ಏಷ್ಯಾ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯ ಡಾ.ಮನೀಷ್ ವೈಶ್ಣೋಯಿ ಅವರ ಉಪಸ್ಥಿತಿಯಲ್ಲಿ ೨೪ ಗಂಟೆಗಳ ಕಾಲ ಕಣ್ಣುಮುಚ್ಚಿ ಮರಳಿನ ಮೇಲೆ ಚಿತ್ರಗಳನ್ನು ಬಿಡಿಸುವ ಸಾಧನೆ ಮಾಡಲಿದ್ದಾಳೆ. ಈಕೆಯ ಕಲಾ ಸಾಧನೆ ಅಲ್ಲಿ ದಾಖಲಾಗಲಿದೆ.
ಪತ್ರಿಕಾಗೋಷ್ಟಿಯಲ್ಲಿ ಈ ಮಾಹಿತಿ ನೀಡಿದ ಪುತ್ತೂರಿನ ವರ್ಣಕಟೀರ ಕಲಾಸಂಸ್ಥೆಯ ಪ್ರವೀಣ್ ವರ್ಣಕುಟೀರ ಅವರು ಶಮಿಕಾ ಕಳೆದ ೪ ವರ್ಷಗಳ ಹಿಂದೆ ಗಾಂಧಾರಿ ವಿದ್ಯೆ ಅಂದರೆ ಕಣ್ಣುಮುಚ್ಚಿ ಓದುವ ವಿದ್ಯೆಯನ್ನು ಅಭ್ಯಸಿಸಿದ್ದಾಳೆ. ಈಕೆ ನಮ್ಮ ಕಲಾ ಸಂಸ್ಥೆಯ ವಿದ್ಯಾರ್ಥಿನಿ. ಕಳೆದ ೪ ತಿಂಗಳಿನಿಂದ ಮರಳುಚಿತ್ರ ರಚನೆಯನ್ನು ಕರಗತ ಮಾಡಿಕೊಂಡಿದ್ದಾಳೆ. ಡಿ.೬ರಂದು ಮಧ್ಯಾಹ್ನ ೧೨ ಗಂಟೆಯಿಂದ ಡಿ.೭ರ ಮಧ್ಯಾಹ್ನ ತನಕ ಕಣ್ಣು ತೆರೆಯದೆ ಸುಮಾರು ೩೦೦ ಕಲಾಚಿತ್ರಗಳನ್ನು ಮರಳಿನಲ್ಲಿ ರಚಿಸಲಿದ್ದಾಳೆ. ಇದಕ್ಕೆ ಹಿನ್ನಲೆಯಾಗಿ ಹಾಡುಗಾರಿಕೆಯೂ ಇದೆ. ಆಕೆಗೆ ಪ್ರತೀ ೩ ಗಂಟೆಗೊಮ್ಮೆ ೧೫ ನಿಮಿಷಗಳ ಬಿಡುವು. ಹಿನ್ನಲೆಯಲ್ಲಿ ಗಾಯಕರು ಹಾಡುವ ಪ್ರತೀ ಒಂದು ಹಾಡಿನ ಭಾವಕ್ಕೆ ಒಂದು ಮರಳುಚಿತ್ರ ಮೂಡಿಬರಲಿದೆ. ಬಳಿಕ ಈ ಚಿತ್ರವನ್ನು ಅಳಿಸಿ ಮತ್ತೊಂದು ಚಿತ್ರ ರಚನೆಯಾಗಲಿದೆ. ಚಿತ್ರ ರಚನೆಯ ಸಂದರ್ಭ ಶಮಿಕಾ ತನ್ನ ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡೇ ಕೇವಲ ಒಳಗಣ್ಣುವಿನ ಮೂಲಕ ಕಲೆಯನ್ನು ಮರಳಿನಲ್ಲಿ ಪಡಿಮೂಡಿಸುತ್ತಾಳೆ.
. ಹಿರೇಬಂಡಾಡಿ ದಾಸರಮೂಲೆಯ ಸಮೀಪದ ಮುಡಿಪು ಎಂಬಲ್ಲಿನ ಕೇಶವ- ಗೀತಾಮಣಿ ದಂಪತಿಗಳ ಏಕಮಾತ್ರ ಪುತ್ರಿ ಈ ಶಮಿಕಾ. ತನ್ನ ೧೫ರ ಹರೆಯದಲ್ಲಿ ಸಾಧನೆಗೆ ಮುಂದಾಗಿರುವ ಈಕೆ ಚಿತ್ರಕಲೆಯಲ್ಲಿ ತನ್ನ ಭವಿಷ್ಯ ಕಟ್ಟಿಕೊಳ್ಳುವ ಬಯಕೆ ಹೊಂದಿದ್ದಾಳೆ. ಈ ಸಂದರ್ಭ ಕಲಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಗೀತಾಲಕ್ಷ್ಮೀ ಕೆದಿಮಾರು, ಸದಸ್ಯ ಬಾಲಸುಬ್ರಹ್ಮಣ್ಯ ಶರ್ಮ, ವಿದ್ಯಾರ್ಥಿನಿ ಶಮಿಕಾ ಮತ್ತು ತಂದೆ ಕೇಶವ ಪಿ.ಎಂ.ಉಪಸ್ಥಿತರಿದ್ದರು.