ಏಷ್ಯಾ ಕಪ್: ಭಾರತ ವಿರುದ್ಧ 2 ಪಂದ್ಯ ಗೆಲ್ಲುತ್ತೇವೆ

ಇಸ್ಲಮಾಬಾದ್,ಆ.25:ಭಾರತದ ವಿರುದ್ಧ ಏಷ್ಯಾ ಕಪ್ ಟೂರ್ನಿಯಲ್ಲಿ ಎರಡೂ ಪಂದ್ಯಗಳಲ್ಲೂ ಪಾಕಿಸ್ತಾನ ಗೆಲುವು ಸಾಧಿಸಲಿದೆ ಎಂದು ವೇಗದ ಬೌಲರ್ ಹ್ಯಾರಿಸ್ ರೌಫ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಏಷ್ಯಾ ಕಪ್‍ಗಾಗಿ ಅಭ್ಯಾಸ ನಡೆಸುತ್ತಿದ್ದ ವೇಳೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ಈ ಬಾರಿ ಎರಡು ಪಂದ್ಯಗಳಲ್ಲೂ ನಾವೇ ಗೆಲ್ಲುತ್ತೇವೆ ಎಂದರು.

ಸೆ.9 ರಿಂದ ದುಬೈನಲ್ಲಿ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಭಾರತ-ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿದ್ದು, ಮೊದಲ ಸುತ್ತಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಎರಡೂ ತಂಡಗಳು ಒಂದು ಬಾರಿ ಮುಖಾಮುಖಿಯಾಗಲಿವೆ. ಈ ಪಂದ್ಯ ಸೆ. 14 ರಂದು ದುಬೈನಲ್ಲಿ ನಡೆಯಲಿದೆ.

ಎರಡೂ ತಂಡಗಳು ಮೊದಲ ಸುತ್ತಿನ ಅಂಕ ಪಟ್ಟಿಯಲ್ಲಿ ಮೊದಲೆರೆಡು ಸ್ಥಾನಗಳನ್ನು ಅಲಂಕರಿಸಿದರೆ, ಸೂಪರ್-4 ಹಂತಕ್ಕೇರಿದೆ. ಈ ಸುತ್ತಿನಲ್ಲೂ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವುದನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು.

ಈ ವಿಷಯವನ್ನೇ ಪ್ರಸ್ತಾಪಿಸಲಿರುವ ಹ್ಯಾರಿಸ್ ಈ ಬಾರಿ ಭಾರತದ ವಿರುದ್ಧ ಎರಡೂ ಪಂದ್ಯಗಳನ್ನು ಗೆಲ್ಲುತ್ತೇವೆ ಎಂದು ಭಾರತಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಈ ಪರೋಕ್ಷ ಎಚ್ಚರಿಕೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳು ಉಭಯ ತಂಡಗಳ ಮುಖಾಮುಖಿಯನ್ನು ಎದುರು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
ಈಗಾಗಲೇ ಭಾರತ-ಪಾಕಿಸ್ತಾನ ತಂಡಗಳ ಘೋಷಣೆಯಾಗಿದೆ.