
ಸಂಜೆವಾಣಿ ನ್ಯೂಸ್
ಮೈಸೂರು: ಅ.07:- ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರನೇ ವರ್ಷದ ಸಂಭ್ರಮಾಚರಣೆ ಏತಕ್ಕಾಗಿ ನಡೆಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಕಾಂಗ್ರೆಸ್‍ನ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಪೆÇ್ರ.ಬಿ.ಕೆ.ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.
ಸೋಮವಾರ ನಗರದ ಜಲದರ್ಶಿನಿ ಅತಿಥಿಗೃಹದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಹಾಗೂ ಮುಖಂಡರು ಆರ್‍ಎಸ್‍ಎಸ್‍ನ 100ನೇ ವರ್ಷದ ಆಚರಣೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.
ಹಿಂದುತ್ವ ಪ್ರತಿಪಾದಿಸುತ್ತಿರುವ ಆರ್‍ಎಸ್‍ಎಸ್‍ನ ಮೂಲ ಉದ್ದೇಶವೆಂದರೆ ಹಿಂದುತ್ವದ ಪ್ರಭುತ್ವವನ್ನು ಸೃಷ್ಟಿ ಮಾಡುವುದು ಮಾತ್ರ. ಯಾವುದೇ ಪ್ರಭುತ್ವ ಜಾತ್ಯಾತೀತ ಹಾಗೂ ಧರ್ಮಾತೀತವಾಗಿರಬೇಕು. ಆದರೆ, ಆರ್‍ಎಸ್‍ಎಸ್‍ಗೆ ಈ ಮನಸ್ಥಿತಿ ಇಲ್ಲ. ಅವರ ಮೂಲ ಅಜೆಂಡ ಹಿಂದುತ್ವ ಮಾತ್ರ ಎಂದರು.
ವೀರ ಸಾವರ್ಕರ್, ಹೆಗ್ಗಡೆವಾರ್ ಅವರನ್ನು ಹಿಂದುತ್ವದ ನಾಯಕರೆಂದು ಬಿಂಬಿಸುತ್ತಿರುವ ಆರ್‍ಎಸ್‍ಎಸ್ ಇಡೀ ದೇಶವನ್ನು ಹಿಂದೂ ರಾಷ್ಟ್ರವಾಗಿಸುವ ಗುರಿ ಹೊಂದಿದೆ. ಯಾವುದೇ ಸರ್ಕಾರವಿರಲಿ ಆಡಳಿತ ನಡೆಸುವವರು ಧರ್ಮಾತೀತವಾಗಿರಬೇಕು. ಇದನ್ನು ಬಿಜೆಪಿ ಹಾಗೂ ಜನಸಂಘದ ಅಟಲ್ ಬಿಹಾರಿ ವಾಜಪೇಯಿ, ಶ್ಯಾಂಪ್ರಸಾದ್ ಮುಖರ್ಜಿ, ಪ್ರೇಮನಾಥ್ ಡೊಗ್ರ ಅಂತಹವರು ಒಪ್ಪಿದ್ದರು ಎಂದರು.
ಜೈಲು ಸೇರಿ ಆರು ತಿಂಗಳಿಗೆ ಬ್ರಿಟೀಷರ ಮುಂದೆ ಮಂಡಿಯೂರಿ ಕ್ಷಮಾಪಣೆ ಕೇಳಿದ ನಂತರ ಎರಡು ವರ್ಷಗಳ ಅವಧಿಯಲ್ಲಿ ಮತ್ತೆ ಕ್ಷಮಾಪಣೆ ಬರೆದುಕೊಟ್ಟ ಸಾವರ್ಕರ್‍ನನ್ನು ಬಿಜೆಪಿ ಹಾಗೂ ಆರ್‍ಎಸ್‍ಎಸ್ ದೇವರನ್ನಾಗಿ ಮಾಡಲು ಹೊರಟಿರುವುದು ಸರಿಯಲ್ಲ ಎಂದರು.
ಪ್ರಧಾನಿ ಮೋದಿ ಅವರು ಚುನಾವಣಾ ಆಯೋಗಕ್ಕೆ ಮುಖ್ಯ ಆಯುಕ್ತರನ್ನು ನೇಮಕ ಮಾಡುವ ಸಮಿತಿಯಲ್ಲಿ ಇದ್ದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಟ್ಟು, ಕೇಂದ್ರದ ಸಂಪುಟದ ಸಚಿವರನ್ನು ಸಮಿತಿಗೆ ಸೇರ್ಪಡೆಗೊಳಿಸುವ ಮೂಲಕ ಚುನಾವಣಾ ಆಯೋಗ ತಮ್ಮ ಕೈಗೊಂಬೆಯನ್ನಾಗಿಸಿಕೊಂಡಿದೆ ಎಂದು ದೂರಿದರು.
ಮೋದಿ ಈ ಮೂಲಕ ಚುನಾವಣಾ ಆಯೋಗದ ಸ್ವಾತಂತ್ರ್ಯ ಹರಣ ಮಾಡಿದ್ದಾರೆ. ಅವರ ಸರ್ಕಾರದಲ್ಲಿ ಹಿರಿಯ ಕಾರ್ಯದರ್ಶಿ ಆಗಿದ್ದ ಜ್ಞಾನೇಶ್‍ಕುಮಾರ್ ಇಂದು ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದಾರೆ. ಅವರಿಂದ ಏನನ್ನು ನಿರೀಕ್ಷೆ ಮಾಡಲು ಸಾಧ್ಯ ಎಂದರು.
ರಾಜ್ಯ ಕಾಂಗ್ರೆಸ್ ಸರರ್ಕಾರಕ್ಕೆ ಜಾತಿ ಗಣತಿಯೇ ಪ್ರಮುಖವಾಗಿದ್ದು, ಬಿಜೆಪಿ ಸೇರಿದಂತೆ ಇತರೇ ಪಕ್ಷಗಳು ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಸಮೀಕ್ಷೆಯಲ್ಲಿ ಜಾತಿಯ ಮಾಹಿತಿಯೊಂದಿಗೆ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಕೂಡ ಆಗುತ್ತಿದೆ. ಇದು ಕೇವಲ ಜಾತಿ ಸಮೀಕ್ಷೆಯಲ್ಲ. ಜನತೆ ಗಣತಿದಾರರರಿಗೆ ಮಾಹಿತಿ ನೀಡುವ ಮೂಲಕ ಸರಕಾರ ನಡೆಸುತ್ತಿರುವ ಸಮೀಕ್ಷೆಗೆ ಜನರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ನಗರ ವಕ್ತಾರ ಮಹೇಶ್ ಮುಂತಾದವರು ಹಾಜರಿದ್ದರು.
































