Home ಜಿಲ್ಲೆ ಮಂಗಳೂರು ಎ.೧೨; ಮಂಗಳೂರಿನಲ್ಲಿ ಬಂಟರ ಸಂಘದ ಬಹಿರಂಗ ಅಧಿವೇಶನ

ಎ.೧೨; ಮಂಗಳೂರಿನಲ್ಲಿ ಬಂಟರ ಸಂಘದ ಬಹಿರಂಗ ಅಧಿವೇಶನ

ಪುತ್ತೂರು: ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಬಹಿರಂಗ ಅಧಿವೇಶನ ಎ. ೧೨ರಂದು ಬೆಳಗ್ಗೆ ೯ಕ್ಕೆ ಮಂಗಳೂರು ಪುರಭವನದಲ್ಲಿ ನಡೆಯಲಿದ್ದು, ಪುತ್ತೂರಿನಿಂದಲೂ ಭಾಗವಹಿಸಲಿದ್ದಾರೆ ಎಂದು ಮಾತೃ ಸಂಘದ ಉಪಾಧ್ಯಕ್ಷ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸಮಾರಂಭದಲ್ಲಿ ರಾಜ್ಯ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ವಿಶ್ವಜಿತ್ ಶೆಟ್ಟಿ ಸವಣೂರು, ರಾಜೇಶ್ ರೈ ಕಲ್ಲಂಗಳ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಸಮಾರಂಭದಲ್ಲಿ ಡಾ.ಕೊಡ್ಮಾನ್ ನಾಗಪ್ಪ ಆಳ್ವ ಮತ್ತು ಕಲ್ಯಾಣಿ ಆಳ್ವ ಅವರ ಸ್ಮರಣಾರ್ಥ ಒಟ್ಟು ೭ ಕ್ಷೇತ್ರಗಳ ೮ ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದೇವೆ.
ಬಂಟರ ಯಾನೆ ನಾಡವರ ಮಾತೃ ಸಂಘದಿಂದ ೧೪ ಮಂದಿ ಸಾಧಕರನ್ನು ಸಮ್ಮಾನಿಸಲಿದ್ದೇವೆ. ಕೊಡಿಯಾಲ್ ಗುತ್ತು ಭಾಸ್ಕರ ರೈ ಸ್ಮರಣಾರ್ಥ ಕಲೆ-ಯಕ್ಷಗಾನ ಕ್ಷೇತ್ರದ ಸಾಧಕ ಪಿ.ಕಿಶನ್ ಹೆಗ್ಡೆ ಅವರನ್ನು ಸಮ್ಮಾನಿಸಲಾಗುತ್ತದೆ ಎಂದರು.
ಎ. ೧೪; ಕಟೀಲು ಮೇಳದ ಯಕ್ಷಗಾನ
ಪುತ್ತೂರು ಜಾತ್ರೆಯ ಸಂದರ್ಭ ದೇವರು ಕೊಂಬೆಟ್ಟು ಕಟ್ಟೆಗೆ ಸವಾರಿ ಬರುವ ಎ. ೧೪ರಂದು ಸಂಜೆ ೫.೩೦ಕ್ಕೆ ಪುತ್ತೂರು ತಾಲೂಕು ಬಂಟರ ಸಂಘದ ವತಿಯಿಂದ ಕೊಂಬೆಟ್ಟು ಬಂಟರ ಭವನದ ಬಳಿ ಕಟೀಲು ಮೇಳದವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಆಯೋಜಿಸಲಾಗಿದೆ. ತಾಲೂಕಿನ ಬಂಟ ಸಮಾಜದ ಬಂಧುಗಳು ಸೇವಾರ್ಥಿಗಳಾಗಿ ಈ ಸೇವೆಯನ್ನು ನೀಡಲಿದ್ದಾರೆ ಎಂದು ತಿಳಿಸಿದರು.
ಉಚಿತ ಶಿಕ್ಷಣ ಯೋಜನೆ
ಬೆಂಗಳೂರು ಬಂಟರ ಸಂಘದ ವತಿಯಿಂದ ಸಮಾಜದ ಬಡ ಕುಟುಂಬಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಕಲ್ಪ ಯೋಜನೆಯ ಮೂಲಕ ಉಚಿತ ವಸತಿ ಸಹಿತ ಪಿಯುಸಿ ಶಿಕ್ಷಣವನ್ನು ಬೆಂಗಳೂರು ಸಂಘದ ಶಿಕ್ಷಣ ಸಂಸ್ಥೆಯಲ್ಲಿ ನೀಡಲಾಗುತ್ತಿದ್ದು, ಎಸೆಸೆಲ್ಸಿಯಲ್ಲಿ ೭೦ ಶೇ.ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದು ಈ ಉಚಿತ ಶಿಕ್ಷಣಕ್ಕೆ ಆಯ್ಕೆಯಾಗಲಿದ್ದಾರೆ. ಬಂಟ ಸಮಾಜದ ಅರ್ಹ ವಿದ್ಯಾರ್ಥಿಗಳು ಎ. ೧೦ರೊಳಗೆ ಅರ್ಜಿ ಸಲ್ಲಿಸಬೇಕಿದ್ದು, ಪುತ್ತೂರಿನ ಬಂಟರ ಸಂಘ ಅಥವಾ ರಾಮಕೃಷ್ಣ ಶಿಕ್ಷಣ ಸಂಸ್ಥೆಯಿಂದ ಅರ್ಜಿಯನ್ನು ಪಡೆಯಬಹುದಾಗಿದೆ. ಎ. ೨೬ರಂದು ಪರೀಕ್ಷೆ ಪುತ್ತೂರು ರಾಮಕೃಷ್ಣ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ಬಂಟರ ಸಂಘದ ಪ್ರಮುಖರಾದ ಕುಂಬ್ರ ದುರ್ಗಾಪ್ರಸಾದ್ ರೈ, ಸಾಜ ರಾಧಾಕೃಷ್ಣ ಆಳ್ವ, ಶಿವನಾಥ ರೈ ಮೇಗಿನಗುತ್ತು, ನಿತ್ಯಾನಂದ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.