Home ಜಿಲ್ಲೆ ಮೈಸೂರು ಎಸ್‍ಸಿಎಸ್‍ಪಿ, ಟಿಎಸ್‍ಪಿ ಅನುದಾನ ಬಳಕೆ ಮಾಡಿ

ಎಸ್‍ಸಿಎಸ್‍ಪಿ, ಟಿಎಸ್‍ಪಿ ಅನುದಾನ ಬಳಕೆ ಮಾಡಿ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.05:-
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಡುವ ಎಸ್‍ಸಿಎಸ್‍ಪಿ, ಟಿಎಸ್‍ಪಿ ಅನುದಾನವನ್ನು ಆಯಾ ಸಮಾಜದ ಬಡಾವಣೆ ಅಭಿವೃದ್ಧಿಪಡಿಸಲು ಕ್ರಿಯಾ ಯೋಜನೆ ರೂಪಿಸುವ ಜತೆಗೆ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಸಲಹೆ ನೀಡಿದರು.


ಮಾನಸ ಗಂಗೋತ್ರಿಯ ವಿಜ್ಞಾನ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ ಅಧಿನಿಯಮ, 2013 ಮತ್ತು ನಿಯಮಗಳು 2017 ಕುರಿತು ಜಿಲ್ಲಾ, ತಾಲೂಕು ಮತ್ತು ನಗರಪಾಲಿಕೆ ವ್ಯಾಪ್ತಿಯ ಅನುಷ್ಠಾನ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವೈಯಕ್ತಿಕ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಜಾತಿ ಪ್ರಮಾಣ ಪತ್ರ ಇರುವುದನ್ನು ಗಮನಿಸಲಾಗುತ್ತದೆ. ಆದರೆ, ಲೋಕೋಪಯೋಗಿ, ನೀರಾವರಿ, ವಿದ್ಯುತ್ ಇಲಾಖೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವಾಗ ಸಾಮಾನ್ಯ ಜನರು ವಾಸಿಸುವ ಬಡಾವಣೆಗಳಿಗೆ ಕ್ರಿಯಾಯೋಜನೆ ರೂಪಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಹಾಗಾಗಿ ಕ್ರಿಯಾಯೋಜನೆ ರೂಪಿಸಿದ ಬಳಿಕ ಸಂಶಯಾಸ್ಪದ ಕಾಮಗಾರಿಗಳ ಕುರಿತಾಗಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಂದ ದೃಢೀಕರಣ ಪಡೆಯುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.


ಕಾಮಗಾರಿ ಅನುಷ್ಠಾನಗೊಂಡ ಮೇಲೆ ಕ್ರಮ ಕೈಗೊಳ್ಳುವ ಬದಲು ಕ್ರಿಯಾ ಯೋಜನೆ ಹಂತದಲ್ಲಿ ಪರಿಶೀಲನೆ ನಡೆಸಿ ದೃಢೀಕರಣ ಪಡೆದರೆ ಸಮಸ್ಯೆಯಾಗಲ್ಲ. ಒಂದು ವೇಳೆ ಸಾಮಾನ್ಯ ಜನರ ಬಡಾವಣೆಗಳಲ್ಲಿ ಕ್ರಿಯಾ ಯೋಜನೆ ರೂಪಿಸಿದ್ದರೆ ಅಂತಹದನ್ನು ತಿರಸ್ಕರಿಸಿ ಬೇರೆ ಕಾಮಗಾರಿಗೆ ಬದಲಿಸಿಕೊಳ್ಳಬಹುದು ಎಂದರು.
ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಭೆ ನಡೆಸಲಾಗುತ್ತದೆ. ಈ ಸಭೆಯಲ್ಲಿ ಹಲವಾರು ಕುಂದುಕೊರತೆಗಳು, ಸಮಸ್ಯೆಗಳನ್ನು ಹೇಳಲಾಗುತ್ತದೆ. ಅದರಲ್ಲಿ ಪ್ರಮುಖವಾಗಿ ಪೆÇೀಡಿ ದುರಸ್ತಿ, ನಿವೇಶನ, ಮನೆ ಸಮಸ್ಯೆ ಹೇಳಿಕೊಳ್ಳುತ್ತಾರೆ. ಇತ್ತೀಚಿಗೆ ಎಸ್‍ಸಿ, ಎಸ್‍ಟಿ ಜನರ ಕಲ್ಯಾಣಕ್ಕೆ ವಿವಿಧ ಇಲಾಖೆಗಳಲ್ಲಿ ಮೀಸಲಿಟ್ಟಿರುವ ಅನುದಾನ ಹೆಸರಿಗಷ್ಟೇ ಇದೆ. ಈ ಜನರಿಗೆ ಬಳಕೆಯಾಗುತ್ತಿಲ್ಲ ಎನ್ನುವ ದೂರುಗಳು ಬರುತ್ತಿವೆ. ಹೀಗಾಗಿ ಪರಿಶೀಲನೆ ನಡೆಸಿದಾಗ ಮೂರ್ನಾಲ್ಕು ಕಡೆಗಳಲ್ಲಿ ಸಾಮಾನ್ಯ ಜನರ ಬೀದಿಗಳಲ್ಲಿ ರಸ್ತೆ, ಚರಂಡಿ, ಯುಜಿಡಿ ನಿರ್ಮಾಣ ಮಾಡಿರುವುದರಿಂದ ಇಲಾಖಾ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಈ ವರ್ಗದ ಜನರು ಇರುವ ಕಡೆಗಳಲ್ಲಿ ಮಾತ್ರ ಕಾಮಗಾರಿ ಕೈಗೆತ್ತಿಗೊಳ್ಳಲು ಕ್ರಿಯಾಯೋಜನೆ ತಯಾರಿಸಬೇಕು ಎಂದು ನುಡಿದರು..


ಇಲಾಖೆಗಳಲ್ಲಿ ಹೊರ ಗುತ್ತಿಗೆ ಏಜೆನ್ಸಿ ಮುಂದುವರಿಸುವಾಗ ಅಧಿಕಾರಿಗಳು ಸೂಕ್ಷ್ಮತೆ ಅರಿಯಬೇಕು. ಕಾನೂನಿನ ಉದ್ದೇಶ ಗಮನಿಸಬೇಕು. ಬಹಳ ವರ್ಷಗಳಿಂದ ಹಿಂದುಳಿದ ಈ ಸಮಾಜವನ್ನು ಮೇಲೆತ್ತಲು ತಂದಿರುವ ಕಾಯಿದೆಯ ಬಗ್ಗೆ ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರುವಂತಾಗಬೇಕು ಎಂದು ಕಿವಿಮಾತು ಹೇಳಿದರು.
ಸಂಪನ್ಮೂಲ ವ್ಯಕ್ತಿ ಕೆ.ಆರ್.ಶಂಕರ್ ಎಸ್‍ಸಿಎಸ್‍ಪಿ, ಟಿಎಸ್‍ಪಿ ಕಾಯಿದೆಗಳಲ್ಲಿ ಇರುವ ಅಧಿನಿಯಮದ ಪ್ರಮುಖ ಅಂಶಗಳನ್ನು ವಿವರಿಸುವ ಮೂಲಕ ಯಾವ ರೀತಿಯಲ್ಲಿ ಅನುಷ್ಟಾನಕ್ಕೆ ತರಬೇಕು, ಕ್ರಿಯಾಯೋಜನೆ ರೂಪಿಸುವಾಗ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.


ಪ್ರಾಸ್ತಾವಿಕ ನುಡಿಗಳನ್ನಾಡಿದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಆರ್ಥಿಕವಾಗಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಹಲವಾರು ಯೋಜನೆ ರೂಪಿಸಿದೆ. ಅದೇ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಕಾಯಿದೆ ತಂದಿದೆ. ಈ ಕಾಯಿದೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಕಾಯಿದೆಯಡಿ ಸರ್ಕಾರದ ಅನುದಾನ ವಾಪಸ್ ಹೋಗದಂತೆ ಅನುಷ್ಠಾನಕ್ಕೆ ತರಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ಮೇಲೆ ಕ್ರಮ, ಜೈಲು ಶಿಕ್ಷೆಗೆ ಗುರಿಪಡಿಸುವ ಅವಕಾಶ ಇದೆ ಎಂದು ಹೇಳಿದರು.


ಹೊರ ಗುತ್ತಿಗೆಯಲ್ಲೂ ಮೀಸಲಾತಿ ಅಳವಡಿಸಿ: ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಿಸಿಕೊಳ್ಳುವಾಗ ಮೀಸಲಾತಿ ಪ್ರಕಾರ ನೇಮಕ ಮಾಡಬೇಕು. ಆಯಾಯ ವರ್ಗಕ್ಕೆ ರೋಸ್ಟರ್ ಪದ್ಧತಿಯಂತೆ ಮೀಸಲಿಡಬೇಕು. ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುತ್ತಿದ್ದರೂ ಒಂದೇ ಏಜೆನ್ಸಿಯಲ್ಲಿ ಕೆಲಸ ಮಾಡುವವರೇ ಮುಂದುವರಿಯುತ್ತಿರುವುದರಿಂದ ಹೊಸಬರಿಗೆ ಅವಕಾಶ ಸಿಗದಂತಾಗಲಿದೆ. ಮೈಸೂರು ವಿವಿ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಈ ಪರಿಸ್ಥಿತಿ ಇರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಹೊರಗುತ್ತಿಗೆ ನೇಮಕದಲ್ಲೂ ಕಡ್ಡಾಯವಾಗಿ ಮೀಸಲಾತಿ ಪ್ರಕಾರ ನೇಮಕಕ್ಕೆ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಸೂಚಿಸಿದರು.


ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಯುತ್ ಮೂಮೆಂಟ್ ಯೋಜನಾ ನಿರ್ದೇಶಕ ಕೆ.ಆರ್.ಶಂಕರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.