Home ಜಿಲ್ಲೆ ಎಸ್ಐಆರ್ ನಿಲ್ಲಿಸಿ ಫಾರ್ಮ್ 7 ದುರುಪಯೋಗದ ತನಿಖೆಗೆ ಆಗ್ರಹಿಸಿ ಎಡ ವಿದ್ಯಾರ್ಥಿ ಯುವಜನ ಸಂಘಟನೆಗಳ ಪ್ರತಿಭಟನೆ

ಎಸ್ಐಆರ್ ನಿಲ್ಲಿಸಿ ಫಾರ್ಮ್ 7 ದುರುಪಯೋಗದ ತನಿಖೆಗೆ ಆಗ್ರಹಿಸಿ ಎಡ ವಿದ್ಯಾರ್ಥಿ ಯುವಜನ ಸಂಘಟನೆಗಳ ಪ್ರತಿಭಟನೆ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಅ.09: ರಾಜ್ಯದಲ್ಲಿ ಅವೈಜ್ಞಾನಿಕ ಹಾಗೂ ಅಪ್ರಜಾತಾಂತ್ರಿಕವಾಗಿ ನಡೆಯುತ್ತಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್ಐಆರ್) ಪ್ರಕ್ರಿಯೆಯನ್ನು ತಕ್ಷಣವೇ ತಡೆಹಿಡಿಯಬೇಕು ಮತ್ತು ಫಾರ್ಮ್ 7ರ ದುರುಪಯೋಗದ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಎಡ ವಿದ್ಯಾರ್ಥಿ ಸಂಘಟನೆಗಳಾದ ಎಐಡಿಎಸ್ಓ – ಎಸ್ಎಫ್ಐ, ಡಿವೈಎಫ್ಐ – ಎಐಡಿವೈಓ ನೇತೃತ್ವದಲ್ಲಿ ಇಂದು ನಗರದ ಕೌಲ್ ಬಜಾರ್, ಕ್ಲಾಕ್ ಟವರ್ ಹತ್ತಿರ ಪ್ರತಿಭಟನೆ ನಡೆಯಿತು.

ಎಐಡಿಎಸ್ಓ ನ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ. ಅನರ್ಹ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಬಳಸುವ ಫಾರ್ಮ್ 7 ಅನ್ನು ಇಂದು ಆಡಳಿತಾರೂಢ ಬಿಜೆಪಿಯು ಅಸ್ತ್ರವಾಗಿ ಮಾಡಿಕೊಂಡಿದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅರ್ಹ ಮತದಾರರ, ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತರು ಮತ್ತು ದಲಿತ ಸಮುದಾಯದವರ ಹೆಸರನ್ನು ಮತದಾರರ ಪಟ್ಟಿಯಿಂದ ಕಾನೂನುಬಾಹಿರವಾಗಿ ಕೈಬಿಡುವ ದೊಡ್ಡ ಪಿತೂರಿ ನಡೆಯುತ್ತಿದೆ. ಅರ್ಜಿದಾರರಿಗೂ ತಿಳಿಯದಂತೆ ಮುದ್ರಿತ ಫಾರ್ಮ್ 7 ಬಳಸಿ ಹೆಸರುಗಳನ್ನು ಅಳಿಸಿಹಾಕಲಾಗುತ್ತಿದೆ ಎಂಬುದು ಮಾಧ್ಯಮಗಳ ವರದಿಗಳಿಂದ ಸಾಬೀತಾಗಿದೆ. ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದೆಯೇ ಎಂಬ ಅನುಮಾನ ಮೂಡುತ್ತಿದ್ದು, ಈ ಎಸ್ಐಆರ್ ಪ್ರಕ್ರಿಯೆಯನ್ನು ಕೈಬಿಡಬೇಕು ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಐಡಿಎಸ್ಓ ಜಿಲ್ಲಾ ಅಧ್ಯಕ್ಷ ಕೆ.ಈರಣ್ಣ, ಖಜಾಂಚಿ ಅನುಪಮಾ, ಕಛೇರಿ ಕಾರ್ಯದರ್ಶಿ ನಿಹಾರಿಕ, ಎಐಡಿವೈಓ ಯುವಜನ ಜಿಲ್ಲಾ ಅಧ್ಯಕ್ಷ ಕೋಳೂರು ಪಂಪಾಪತಿ ,ಎಸ್.ಎಫ್.ಐ ತಾಲೂಕು ಅಧ್ಯಕ್ಷ ವರದರಾಜ್, ಡಿ.ವೈಎಫ್.ಐ ಜಿಲ್ಲಾ ಅಧ್ಯಕ್ಷರ ಎರ್ರಿಸ್ವಾಮಿ ,

ಉಪಾಧ್ಯಕ್ಷ ಬೈಲಾ ಹನುಮಂತ, ಖಜಾಂಚಿ ಬಿ.ಪಿ ನವಿನ್, ಕ್ರೀಡಾ ಘಟಕದ ಅಧ್ಯಕ್ಷ ಜಿ.ಎನ್ ಎರ್ರಿಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್ ಹಾಗೂ ಎಐಡಿವೈಓ ಸದಸ್ಯರು ಈ.ಹೆಚ್ ಪ್ರಮೋದ್ ಮೊದಲಾದವರು ಭಾಗವಹಿಸಿದ್ದರು.