ಎಲ್ಲರನ್ನು ಒಗ್ಗೂಡಿಸುತ್ತಿರುವುದು ಕನ್ನಡ ಭಾಷೆ: ಶಾಸಕ ದರ್ಶನ್

ಸಂಜೆವಾಣಿ ವಾರ್ತೆ
ನಂಜನಗೂಡು: ನ.02:
– ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದ ಮುಂಭಾಗದಲ್ಲಿ ಆಚರಣೆ ಮಾಡಲಾಯಿತು.


ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕರಾದ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಕನ್ನಡ ನಾಡಿನಲ್ಲಿ ಭಾಷೆ ಉಳಿಸುವ ಹೋರಾಟಗಳು ನಡೆಯುತ್ತಲೇ ಇವೆ. ಮೈಸೂರು ಮತ್ತು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ತಮಿಳು, ತೆಲುಗು, ಮರಾಠಿ, ಮಲಯಾಳಂ ಸೇರಿದಂತೆ ಹಲವು ಭಾಷೆಗಳನ್ನು ಮಾತನಾಡುವ ಜನರು ನಮ್ಮ ರಾಜ್ಯದಲ್ಲಿದ್ದಾರೆ. ನಮ್ಮ ರಾಜ್ಯವು ಹಲವು ಭಾಷೆಗಳ ನೆಲೆಯಾಗಿದೆ. ಸಂವಿಧಾನದಲ್ಲಿ ಭಾಷೆಗಳಿಗೆ ಮಾನ್ಯತೆ ನೀಡಲಾಗಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ, ಮಂಗಳೂರು ಸೇರಿದಂತೆ ರಾಜ್ಯದಲ್ಲಿ ವಿಭಿನ್ನವಾಗಿ ಕನ್ನಡ ಭಾಷೆಯನ್ನು ಮಾತನಾಡುವುದು ವಿಶೇಷವಾಗಿದೆ. ಎಲ್ಲರನ್ನು ಒಗ್ಗೂಡಿಸುವ ಭಾಷೆ ಇದಾಗಿದ್ದು, ನಮ್ಮ ಸರ್ಕಾರವು ಕನ್ನಡ ಭಾಷೆಗೆ ಮೊದಲ ಆದ್ಯತೆಯನ್ನು ನೀಡುತ್ತಾ ಬಂದಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯನ್ನು ಮಾತನಾಡುವವರೇ ಕಡಿಮೆಯಾಗಿದ್ದಾರೆ. ಇತ್ತೀಚಿನ ಮಕ್ಕಳಲ್ಲಿಯೂ ಕನ್ನಡ ಭಾಷೆ ಮರೆಯಾಗುತ್ತಿದೆ. ಕನ್ನಡವನ್ನು ಬಳಸದೆ ಇರುವುದು ಬೇಸರ ತರುತ್ತದೆ. ನಾನು ಶಾಲೆಯಲ್ಲಿ ಓದುತ್ತಿದ್ದಾಗ


ಇಂಗ್ಲಿಷ್ ಮಾಧ್ಯಮ ಖಾಸಗಿ ಶಾಲೆಗಳಲ್ಲಿ ಕನ್ನಡ ಭಾಷೆ ಮಾತನಾಡಿದರೆ ಫೈನ್ ಹಾಕ್ತಾ ಇದ್ರು, ಅದು ಈಗಲೂ ಶಾಲೆಯಲ್ಲಿ ಇದೀಯಾ ಎಂದು ಪ್ರಶ್ನಿಸಿದರು. ಒಂದು ದಿನಕ್ಕೆ ಮಾತ್ರ ಕನ್ನಡ ಭಾಷೆ ಸೀಮಿತವಾಗದೆ ಪ್ರತಿನಿತ್ಯ ನಾವು ಬಳಸುವ ಮಾತಿನಲ್ಲಿ ಕನ್ನಡವನ್ನು ಮಾತನಾಡಿದರೆ ಭಾಷೆ ಉಳಿಸಲು ಸಾಧ್ಯವಾಗುತ್ತದೆ ಎಂದರು.
ಇನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ತಾಲ್ಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ನಗರಸಭಾ ಅಧ್ಯಕ್ಷ ಶ್ರೀಕಂಠ, ಸಾಹಿತಿ ಡಾ.ಸಿ ನಾಗಣ್ಣ, ಡಿವೈಎಸ್ಪಿ ರಘು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಪೌರಾಯುಕ್ತ ವಿಜಯ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.