ಎಲ್‍ಐಸಿ ಕಪ್: ಚಾಮರಾಜನಗರ-ಕೊಳ್ಳೇಗಾಲ ತಂಡ ಚಾಂಪಿಯನ್

ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.28:-
ಮೈಸೂರು ವಿಭಾಗದ ವಿಭಾಗೀಯ ಮಟ್ಟದ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿ -2025 ರಲ್ಲಿ ಚಾಮರಾಜನಗರ-ಕೊಳ್ಳೇಗಾಲ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಭಾರತೀಯ ಜೀವವಿಮಾ ಕ್ರೀಡಾಕೂಟ, ಮೈಸೂರು ವತಿಯಿಂದ ಮೈಸೂರು ವಿಭಾಗದ ವಿಭಾಗೀಯ ಮಟ್ಟದ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಚಾಮರಾಜನಗರ-ಕೊಳ್ಳೇಗಾಲ ತಂಡ ಮೈಸೂರು ವಿಭಾಗೀಯ ಕಛೇರಿಯ ತಂಡವನ್ನು 10 ರನ್‍ಗಳ ರೋಚಕ ಜಯಗಳಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಮೊದಲು ಬ್ಯಾಟಿಂಗ್ ನಡೆಸಿ ಚಾಮರಾಜನಗರ-ಕೊಳ್ಳೇಗಾಲ ತಂಡ ಸಿದ್ದು, ಹರೀಶ್‍ರವರ ಉತ್ತಮ ಬ್ಯಾಟಿಂಗ್ ನೆರವಿನಿಂದ ನಿಗಧಿತ 6 ಓವರ್‍ಗಳಲ್ಲಿ 57 ರನ್‍ಗಳಿಸಿತು. ನಂತರ ಬ್ಯಾಟಿಂಗ್ ನಡೆಸಿದ ಮೈಸೂರು ವಿಭಾಗೀಯ ತಂಡ 6 ಒವರ್‍ಗಳಲ್ಲಿ 47 ರನ್ ಗಳಿಸಲಷ್ಟೆ ಸಾಧ್ಯವಾಯಿತು.


ಚಾಮರಾಜನಗರ-ಕೊಳ್ಳೇಗಾಲ ತಂಡದ ಶರತ್‍ಕುಮಾರ್ ಅವರು ಪಂದ್ಯಾವಳಿಯಲ್ಲಿ 123 ರನ್ ಗಳಿಸಿ ಹಾಗೂ 5 ವಿಕೆಟ್‍ಗಳನ್ನು ಪಡೆದು ಉತ್ತಮ ಆಲ್‍ರೌಂಡ್ ಆಟಕ್ಕಾಗಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ, ಹರೀಶ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು ಹಾಗೂ ಲೋಕೇಶ್ ಸರಣಿಯಲ್ಲಿ 5 ವಿಕೆಟ್ ಪಡೆದು ಉತ್ತಮ ಬೌಲರ್ ಪ್ರಶಸ್ತಿ ಪಡೆದರು.


ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದ ಎಲ್‍ಐಸಿ ಸೀನಿಯರ್ ಡಿವಿಜಿನಲ್ ಮ್ಯಾನೇಜರ್ ಎಂ.ಕೃಷ್ಣವೇಣಿ ಅವರು, ನಮ್ಮ ಸಂಸ್ಥೆಯ ನೌಕರರುಪ್ರತಿ ದಿವಸ ಒತ್ತಡದಿಂದ ಕರ್ತವ್ಯ ನಿರ್ವಹಿಸುತ್ತಾ ಬರುತ್ತಿದ್ದು, ಜೀವನದಲ್ಲಿ ಜಂಜಾಟದಿಂದ ಹೊರಬರಲು ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ತುಂಬಾ ಸಂತೋಷ. ಹಾಗೆಯೇ ಮುಂದೆಯೂ ಸಹ ವಿವಿಧಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬದುಕಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಕ್ರೀಡಾ ಮನೋಭಾವ ಮುಖ್ಯ. ಪಂದ್ಯದಲ್ಲಿ ಒಂದು ತಂಡವಾಗಿ ಆಡಿದಾಗ ಗೆಲುವು ಸಾಧ್ಯ ಎಂಬುದನ್ನು ಇಲ್ಲಿ ನಿರೂಪಿಸಿದ್ದೀರಿ. ಸದಾ ಒತ್ತಡದಲ್ಲಿರುವ ನೌಕರರು ವರ್ಷಕ್ಕೊಮ್ಮೆಯಾದರೂ ಈ ರೀತಿ ಇಡೀ ಒಂದು ದಿನ ಬೆರತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜೀವನದ ಜಂಜಾಟ ಮರೆಯಬೇಕು ಎಂದು ಕರೆ ನೀಡಿದರು.
ಎಲ್‍ಐಸಿಯ ಪಿಅಂಡ್‍ಐಆರ್ ಮ್ಯಾನೇಜರ್ ಜಯರಾಮ್ ನೆಲ್ಲಿತಾಯ ಮಾತನಾಡಿ, ಜೀವವಿಮಾ ನೌಕರರು ತಮ್ಮೆಲ್ಲಾ ಜಂಜಾಟಗಳನ್ನು ಮರೆತು ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಉತ್ತಮವಾಗಿ ಆಟವಾಡುವ ಮೂಲಕ ನಮ್ಮೆಲ್ಲರಿಗೂ ಮನರಂಜನೆ ನೀಡಿದ್ದೀರಿ. ಇಲ್ಲಿ ಒಂದು ತಂಡವು ಗೆದ್ದಿದ್ದರೂ, ಸೋತ ತಂಡವು ಸಹ ಕ್ರೀಡಾ ಸ್ಫೂರ್ತಿ ಮೆರೆದಿದೆ ಇದಕ್ಕಾಗಿ ಅವರಿಗೆ ಅಭಿನಂದನೆಗಳು ಎಂದು ಶ್ಲಾಘಿಸಿದರು.


ಭಾರತೀಯ ಜೀವವಿಮಾ ನಿಗಮದ ಮೈಸೂರು ವಿಭಾಗದ ಮಾರ್ಕೆಟಿಂಗ್ ಮ್ಯಾನೇಜರ್ ಎನ್. ಜೀವನ್‍ಕುಮಾರ್ ಅವರು ಮಾತನಾಡಿ, ಯಾವುದೇ ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ನಾವು ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಈ ಪಂದ್ಯಾವಳಿಯಲ್ಲಿ ಎಲ್ಲಾ ತಂಡಗಳು ಕ್ರೀಡಾ ಮನೋಭಾವದಿಂದ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ್ದೀರಿ ಎಂದು ತಿಳಿಸಿದರು. ಮುಂಬರುವ ವರ್ಷಗಳಲ್ಲಿ ಇದೇ ರೀತಿ ಕ್ರೀಡೆಗಳಲ್ಲಿ ಪಾಲ್ಗೊಂಡಲ್ಲಿ ಲೌಖಿಕ ವ್ಯವಹಾರದಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಮಯದಲ್ಲಿ ವಿಭಾಗೀಯ ಕಛೇರಿ ವ್ಯವಸ್ಥಾಪಕ ಮಂಜುನಾಥ್, ಎಲ್‍ಐಸಿಯ ಆಲ್‍ಇಂಡಿಯಾ ಸ್ಪೋಟ್ರ್ಸ್ ಪ್ರಮೋಷನ್ ಸದಸ್ಯ ಸುರೇಶ್, ಮೈಸೂರು ಭಾರತೀಯ ಜೀವ ವಿಮಾ ಕ್ರೀಡಾಕೂಟ ಕಾರ್ಯದರ್ಶಿ ಎಸ್. ಸತೀಶ್ ಸೇರಿದಂತೆ ಎಲ್ಲಾ ಶಾಖೆಗಳ ಕ್ರೀಡಾಪಟುಗಳು ಹಾಜರಿದ್ದರು.