
ಸುಳ್ಯ:ಗೋವಿನ ಕೈಂಕರ್ಯ ಪುಣ್ಯದ ಕಾರ್ಯ. ದೇಶಿಯ ತಳಿಗಳ ಮೂಲಕ ಗೋ ಸಂಪತ್ತು ಉಳಿಸುವ ಕಾರ್ಯಕ್ಕೆ ಹಿಂದೂ ಸಮಾಜ ಕೈಜೋಡಿಸಬೇಕು. ಈ ಮೂಲಕ ಗೋವುಗಳ ರಕ್ಷಣೆ ಆಗಬೇಕು ಎಂದು ಖ್ಯಾತ ವಾಗ್ಮಿ ಹಾರಿಕಾ ಮುಂಜುನಾಥ ಹೇಳಿದರು.
ವಿಶ್ವ ಹಿಂದೂ ಪರಿಷದ್ ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಸುಳ್ಯ ಪ್ರಖಂಡ, ಅಯೋಧ್ಯೆ ಶಾಖೆ ಎಲಿಮಲೆ ಇದರ ಆಶ್ರಯದಲ್ಲಿ ಭಾನುವಾರ ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ ವಠಾರದಲ್ಲಿ ನಡೆದ ಆರನೇ ವರ್ಷದ ಸಾರ್ವಜನಿಕ ಗೋಪೂಜಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ನಾರಾಯಣ ಗೌಡ ಅಂಬೆಕಲ್ಲು ಕಾರ್ಯಕ್ರಮ ಉದ್ಘಾಟಿಸಿದರು. ವಿ.ಹಿಂ.ಪ. ಅಯೋಧ್ಯೆ ಶಾಖೆ ಎಲಿಮಲೆ ಇದರ ಅಧ್ಯಕ್ಷ ಭೋಜಪ್ಪ ಗೌಡ ಹರ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘಚಾಲಕ ಚಂದ್ರಶೇಖರ ತಳೂರು, ಮಾಧವ ದಾಸನಕಜೆ, ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕರ್, ಪುತ್ತೂರು ಜಿಲ್ಲಾ ಸಹಕಾರ್ಯದರ್ಶಿ ಪ್ರಮೋದ್ ರೈ ಕಡಬ, ಬಜರಂಗದಳ ಸುಳ್ಯ ಪ್ರಖಂಡದ ಕಾರ್ಯದರ್ಶಿ ನವೀನ್ ಎಲಿಮಲೆ, ಬಜರಂಗದಳ ಸುಳ್ಯ ಪ್ರಖಂಡದ ಸಂಚಾಲಕ ಹರಿಪ್ರಸಾದ್ ಎಲಿಮಲೆ, ವಿಶ್ವ ಹಿಂದೂ ಪರಿಷದ್ ಕಾರ್ಯದರ್ಶಿ ಸುನಿಲ್ ಸುಳ್ಳಿ, ಗೋರಕ್ಷಾ ಪ್ರಮುಖ್ ನಾಗರಾಜ ಕೇಪಳಕಜೆ, ದುರ್ಗಾವಾಹಿನಿ ಸಂಯೋಜಕಿ ಜಯಂತಿ ಎಲಿಮಲೆ, ಮಾತೃಶಕ್ತಿ ಸಂಯೋಜಕಿ ಶಶಿಕಲಾ ಕಾಡುಜಬಳೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀಧರ ಗೌಡ ಕೆರೆಮೂಲೆ, ಯೋಧ ಶಶಿಶೇಖರ ಕಲ್ಲುಕಟ್ಟ ,ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ರಶ್ಮಿ ಕೇಪಳಕಜೆ ಅವರನ್ನು ಸನ್ಮಾನಿಸಲಾಯಿತು. ಕುಲದೀಪ್ ಹರ್ಲಡ್ಕ ಸ್ವಾಗತಿಸಿ ವಂದಿಸಿದರು. ಉದಯ ಕುಮಾರ್ ಚಳ್ಳ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ದಿನೇಶ್ ಕೋಡಪದವು ಸಾರಥ್ಯದಲ್ಲಿ “ಯಕ್ಷ ತೆಲಿಕೆ” ಯಕ್ಷ ಹಾಸ್ಯ ವೈಭವ ನಡೆಯಿತು.

































