Home ಜಿಲ್ಲೆ ಎರಡನೇ ದಿನದ ಹಂಪಿ ಉತ್ಸವಕ್ಕೆ ತಾರಾ ಮೆರಗು*

ಎರಡನೇ ದಿನದ ಹಂಪಿ ಉತ್ಸವಕ್ಕೆ ತಾರಾ ಮೆರಗು*

ನಟಿ ಸಪ್ತಮಿ ಗೌಡ, ಬಿಗ್ ಬಾಸ್ ವಿಜೇತ ಗಿಲ್ಲಿ ನಟರಾಜ್ ಹಾಗೂ ಕಾವ್ಯಾ ಭಾಗಿ*

ಸಂಜೆವಾಣಿ ವಾರ್ತೆ

ವಿಜಯನಗರ :ಫೆ.15: ಹಂಪಿ ಉತ್ಸವದ ಎರಡನೇ ದಿನದ ಶನಿವಾರದ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್  ನಟಿ ಸಪ್ತಮಿ ಗೌಡ, ಬಿಗ್ ಬಾಸ್ ರಿಯಾಲಿಟಿ ಶೋ ವಿಜೇತ ಗಿಲ್ಲಿ ಹಾಗೂ ಸ್ಪರ್ಧಿ ಕಾವ್ಯ ಭಾಗವಹಿಸಿ ಉತ್ಸವಕ್ಕೆ ತಾರಾ ಮೆರಗು ನೀಡಿದರು.

ಶ್ರೀ.ಎಂ.ಪಿ.ಪ್ರಕಾಶ್ ಪ್ರಧಾನ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಶಾಸಕ ಹೆಚ್.ಆರ್ ಗವಿಯಪ್ಪ ನೆರವೇರಿಸಿದರು. ಈ ವೇಳೆ ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ್ ನಾಯ್ಕ್, ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ್, ಸಂಡೂರು ಶಾಸಕಿ ಅನುಪೂರ್ಣ ತುಕಾರಾಂ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಮಾಮ್ ನಿಯಾಜ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ ಉಪಸ್ಥಿತರಿದ್ದರು.

ಆರಂಭದಲ್ಲಿ ಉದಯೋನ್ಮಕ ನಟಿ ನಿಕಿತಾ ಸ್ವಾಮಿ ‘ತರತರ ಹಿಡಿಸಿದೆ ಮನಸಿಗೆ ನೀನು’ ಹಾಗೂ ‘ಬಂಗಾರಿ ಯಾರೇ ನೀನು ಬುಲ್ ಬುಲ್’ ಎನ್ನುವ ಹಾಡಿಗೆ ನೃತ್ಯ ಮಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಂಗು ತುಂಬಿದರು. ನಂತರ ಅಭಿಮಾನಿಗಳಿಗೆ ವ್ಯಾಲೆಂಟೈಸ್ ಡೇ ಶುಭಾಶಯ ಕೋರಿ, ಹಂಪಿ ಉತ್ಸವದಲ್ಲಿ ಅವಕಾಶ ನೀಡಿದ್ದಕ್ಕೆ ಧನ್ಯವಾದವನ್ನು ತಿಳಿಸಿದರು.

ನಂತರ ಕಾಂತಾರ ಬೆಡಗಿ ಸಪ್ತಮಿ ಗೌಡ, ‘ಏನು ಹೇಳಲಿ ನಾನು ಹೊಸತರ’ ಹಾಗೂ ‘ಸಿಂಗಾರ ಸಿರಿಯೇ’ ಹಾಡಿಗೆ ಹೆಜ್ಜೆ ಹಾಕಿ ಅಭಿಮಾನಿಗಳನ್ನು ರಂಜಿಸಿದರು. ನಂತರ ಮಾತನಾಡಿ, ಹೊಸಪೇಟೆ ಆಗಮಿಸಿದಾಗಲೆಲ್ಲಾ ಪ್ರವಾಸಿ ಮಾರ್ಗದರ್ಶಿಗಳನ್ನು ಪಡೆದು ಹಂಪಿ ಹಾಗೂ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುತ್ತೇನೆ. ಈ ಭಾಗದ ಜನರು ಕನ್ನಡ ಚಲನಚಿತ್ರಗಳಿಗೆ ಮೊದಲಿನಿಂದಲ್ಲೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಇದೇ ತಿಂಗಳ ಫೆ.27 ರಂದು ನಾನು ನಟಿಸಿದ ರೈಜ್ ಆಫ್ ಆಶೋಕ ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರ ನೋಡಿ ಹರಸುವಂತೆ ಅಭಿಮಾನಿಗಳಲ್ಲಿ ವಿನಂತಿಸಿದರು. ಕೊನೆಯಲ್ಲಿ ವ್ಯಾಲೆಂಟೈಸ್ ಡೇ ಶುಭಾಶಯ ಕೋರಿ ಪಾಪ್ ಕಾರ್ನ್ ಮಂಕಿ ಚಿತ್ರದ ಡೈಲಾಗ್ ಹೇಳಿ ಅಭಿಮಾನಿಗಳನ್ನು ಸಂತಸ ಪಡಿಸಿದರು. ಕಾರ್ಯಕ್ರಮದ ನಂತರ ಮನೆಗಳಿಗೆ ಕ್ಷೇಮವಾಗಿ ತಲುಪುವಂತೆ ಹೇಳಿದರು.

ಕನ್ನಡದ ಪ್ರಸಿದ್ಧ ರ್ಯಾಪರ್ ಅಲೋಕ್ ಆರ್ ಬಾಬು ತಮ್ಮದೇ ರಚನೆ ಹಾಗೂ ಸ್ವರ ಸಂಯೋಜನೆಯ ಪಾಶ್ಚಿಮಾತ್ಯ ಶೈಲಿಯ ಗೀತೆಗಳನ್ನು ಹಾಡಿ ಜನರ ಚಪ್ಪಾಳೆ ಗಿಟ್ಟಿಸಿಕೊಂಡರು.

ಗಿಲ್ಲಿ ಹಾಗೂ ಕಾವ್ಯಾ ಜೋಡಿ ಮೋಡಿ:

ಪ್ರಸಕ್ತ ಬಿಗ್ ಬಾಸ್ ಸೀಜನ್  ವಿಜೇತ ಹ್ಯಾಸ್ಯ ಕಲಾವಿದ ಗಿಲ್ಲಿ ಹಾಗೂ ಕಿರುತರೆ ನಟಿ ಕಾವ್ಯಾ ಜೋಡಿ ಹಂಪಿ ಉತ್ಸವದಲ್ಲಿ ಮೋಡಿ ಮಾಡಿತು. ನಾಡಿನ ಜನತೆ ಸಾಕಷ್ಟು ಪ್ರೀತಿಯನ್ನು ನೀಡಿದ್ದಾರೆ. ನನ್ನ ಹಾಗೂ ಭವ್ಯಾ ನಡುವಿ ಸಂಬಂದ ಕುರಿತು  ಸಾಕಷ್ಟು ಚರ್ಚೆ ನಡೆಯುತ್ತಿದೆ. ನಾವಿಬ್ಬರೂ ಉತ್ತಮ ಸ್ನೇಹಿತರು. ಇದರ ಹೊರತಾಗಿ ಇರುವ ವಿಷಯಗಳ ಊಹೆಗಳು ಅಷ್ಟೇ ಎಂದು ಗಿಲ್ಲಿ ನಟರಾಜ್ ಸ್ಪಷ್ಟ ಪಡಿಸಿದರು. 

ನಂತರ ಚಲನಚಿತ್ರ ಗೀತೆಗಳ ಗಾಯಕ ನವೀನ್ ಸಜ್ಜು ಕನ್ನಡ ಗೀತೆಗಳನ್ನು ಹಾಡುಗಳನ್ನು ಪ್ರಸ್ತುತ ಪಡಿಸಿ ಜನರ ಸಿಳ್ಳೇ ಹಾಗೂ ಚಪ್ಪಾಳೆ ಗಿಟ್ಟಿಸಿದರು.

ಕಲಾವಿದರನ್ನು ಜಿಲ್ಲಾಡಳಿತದಿಂದ ಗೌರವಿಸಲಾಯಿತು.ಇದೇ ವೇಳೆ ಆಕಾಶದಲ್ಲಿ ಡ್ರೋನ್ಗಳ ಪ್ರದರ್ಶನ ನಡೆಯಿತು. ನಿರೂಪಕ ನಿರಂಜನ್ ದೇಶ್ಪಾಂಡೆ ಹಾಗೂ ಚೈತ್ರಾ ವಾಸುದೇವನ್ ಕಾರ್ಯಕ್ರಮ ನಿರೂಪಿಸಿದರು.