ಎನ್.ಎಂ.ಡಿ.ಸಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.28:
ಎಐಯುಟಿಯುಸಿಗೆ ಸಂಯೋಜನೆಗೊಂಡ ಸಂಯುಕ್ತ ಗಣಿ ಕಾರ್ಮಿಕ ಸಂಘದಿಂದ  ದೋಣಿಮಲೈ ನಲ್ಲಿರುವ  ಪೆಲೆಟ್ ಪ್ಲಾಂಟ್ ಹಾಗೂ ಬೆನಿಫಿಕೇಷನ್ ಪ್ಲಾಂಟ್, ಗುತ್ತಿಗೆ ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರೆಸಲು  ಎನ್.ಎಂ.ಡಿ.ಸಿ ಮುಖ್ಯ ದ್ವಾರ ಬಂದ್ ಮಾಡಿ ನಿನ್ನೆ ಹೋರಾಟ ನಡೆಸಿದರು.
ಖಾಯಂ ಹಾಗು ಗುತ್ತಿಗೆ ನೌಕರರನ್ನು, ವಾಹನಗಳನ್ನು ಒಳಗೆ ಬಿಡದೆ ಹೋರಾಟ ಮುಂದುವರೆಯಿತು. ಬೆಳಿಗ್ಗೆ 4 ಗಂಟೆಯಿಂದ ಕಾರ್ಮಿಕರು ಎನ್.ಎಂ.ಡಿ.ಸಿ ಮುಖ್ಯ ದ್ವಾರವನ್ನು ಬಂದ್ ಮಾಡಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸಿದ್ದಾರೆ.
ಹೋರಾಟಕ್ಕೆ ಸಂಸದ ಈ.ತುಕರಾಂ  ಬೆಂಬಲಿಸಿ.  ಕೆಲಸದಿಂದ ವಜಾಗೊಂಡ ಗುತ್ತಿಗೆ ಕಾರ್ಮಿಕರನ್ನು ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳುವಂತೆ  ಒತ್ತಾಯಿಸಿದರು.
ಸಂಯುಕ್ತ ಗಣಿ ಕಾರ್ಮಿಕರ ಸಂಘದ ಕಾರ್ಯಾಧ್ಯಕ್ಷ ಎ.ದೇವದಾಸ್  ಮಾತನಾಡಿ ” ಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಂಡು ಇಂದಿಗೆ 10 ದಿನಗಳಾಗಿವೆ. ಎನ್.ಎಂ.ಡಿ.ಸಿ ಆಡಳಿತವು ಹೊಸ ಗುತ್ತಿಗೆದಾರರ ಮೇಲೆ  ಜವಾಬ್ದಾರಿಯನ್ನು ಹೊರೆಸಿ ಕೈ ತೊಳೆದುಕೊಳ್ಳುತ್ತಿದೆ. ಕಾರ್ಖಾನೆ ಕೂಡಲೆ ಪ್ರಾರಂಭಿಸುವುದಕ್ಕೆ, ಈಗಿರುವ ಕಾರ್ಮಿಕರನ್ನೇ ಮುಂದುವರೆಸುವ ಬಗ್ಗೆ  ಎನ್.ಎಂ.ಡಿ.ಸಿ ಬದ್ಧತೆ ತೋರುತ್ತಿಲ್ಲ. ಯಾವುದೇ ಸ್ಪಷ್ಟತೆಯೂ ಸಹ ನೀಡುತ್ತಿಲ್ಲ. 8-10 ವರ್ಷಗಳಿಂದ ಎನ್.ಎಂ.ಡಿ.ಸಿಗಾಗಿ ಹಗಲಿರುಳು ದುಡಿದ ಕಾರ್ಮಿಕರನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ಅತ್ಯಂತ ನೋವಿನ ವಿಷಯ. ಈ ಹಿನ್ನೆಲೆಯಲ್ಲಿ  ಕೂಡಲೆ ಹೊಸ ಗುತ್ತಿಗೆದಾರರು  ಎಲ್ಲಾ ಗುತ್ತಿಗೆ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ಎನ್.ಎಂ.ಡಿ.ಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ  ಕಾರ್ಮಿಕರು ಸಜ್ಜಾಗಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷ ಕಾ.ಸೋಮಶೇಖರ ಗೌಡ, ಸಂಯುಕ್ತ ಗಣಿ ಕಾರ್ಮಿಕ ಸಂಘದ ಕಾರ್ಯದರ್ಶಿ ಡಾ.ಪ್ರಮೋದ್, ಖಜಾಂಚಿ ಸುರೇಶ್,  ಮುಖಂಡರಾದ ಹುಲಿಗೇಶ್, ಮಂಜುನಾಥ್, ಸಂತೋಷ್ ಕುಮಾರ್, ರಾಜಪ್ಪ, ಹುಲಿಯಪ್ಪ ಮುಂತಾದವರು ಇದ್ದರು.‌.