
ಸಂಜೆವಾಣಿ ನ್ಯೂಸ್
ಮೈಸೂರು: ನ.15:- ಬಿಹಾರ ಚುನಾವಣೆಯಲ್ಲಿ ಎನ್‍ಡಿಎ ಒಕ್ಕೂಟ ಪ್ರಚಂಡ ಗೆಲವು ಸಾಧಿಸಿದ ಹಿನ್ನೆಲೆ ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸಂಭ್ರಮಾಚರಣೆ ನಡೆಸಲಾಯಿತು.
ನಗರದ ಕಚೇರಿ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ಬಿಜೆಪಿ ನಗರ ಮತ್ತು ಗ್ರಾಮಾಂತರ ಘಟಕದಿಂದ ನಡೆದ ಸಂಭ್ರಮಾಚರಣೆಯಲ್ಲಿ ಭಾಗಿಯಾದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಶಾಸಕ ಟಿ.ಎಸ್. ಶ್ರೀವತ್ಸ ಅವರ ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭ ಮಾತನಾಡಿದ ಶಾಸಕ ಟಿ.ಎಸ್.ಶ್ರೀವತ್ಸ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಡಬಲ್ ಎಂಜಿನ್ ಸರ್ಕಾರಕ್ಕೆ ಮತದಾರರು ಗೆಲುವಿನ ಮುದ್ರೆ ಒತ್ತಿದ್ದಾರೆ. ನಿತೀಶ್ ಕುಮಾರ್ 20 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಗಮನಿಸಿ ಅಲ್ಲಿನ ಮತದಾರರು ಎನ್‍ಡಿಎಗೆ ಬೆಂಬಲ ನೀಡಿದ್ದಾರೆ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರ ಪಕ್ಷ ಮತಗಳ್ಳತನ ನಡೆಯುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಚುನಾವಣಾ ಆಯೋಗ ಇದರಲ್ಲಿ ಶಾಮೀಲಾಗಿದೆ ಎಂದು ಆರೋಪಿಸಿದ್ದರು. ಜತೆಗೆ ಚುನಾವಣೆ ಪ್ರಚಾರ ಸಂದರ್ಭ ಪ್ರಧಾನಿ ಮೋದಿ ಅವರ ತಾಯಿಯ ಬಗ್ಗೆ ಕೇವಲವಾಗಿ ಮಾತನಾಡಿದ್ದರು. ಇದರಿಂದ ಕೆರಳಿದ ಮತದಾರರು ಎನ್‍ಡಿಎ ಪರ ನಿಂತಿದ್ದಾರೆ ಎಂದರು.
ಬಿಹಾರದಲ್ಲಿ ಹಿಂದೆಂದಿಗಿಂತಲೂ ಭರ್ಜರಿ ಗೆಲವು ದಾಖಲಿಸಿದ್ದು, ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಸಲಾದ ಅಪಪ್ರಚಾರಗಳು ಫಲಿಸಿಲ್ಲ. ಅಪಪ್ರಚಾರಕ್ಕೆ ಸರಿಯಾದ ಉತ್ತರವನ್ನು ದೇಶದ ಜನ ನೀಡಿದ್ದಾರೆ, ಮುಂದೆಯೂ ನೀಡುತ್ತಾರೆ. ಚುನಾವಣಾ ಆಯೋಗ ಮತ ಕಳ್ಳತನದ ಬಗ್ಗೆ ದೂರು ನೀಡಲು ತಿಳಿಸಿದ್ದರೂ, ರಾಹುಲ್ ಗಾಂಧಿ ದೂರು ನೀಡಲು ಹೆದರಿದ್ದಾರೆ. ದೇಶದೆಲ್ಲೆಡೆ ಹಿಟ್ ಆಂಡ್ ರನ್ ಮಾತ್ರವೇ ಮಾಡಿದ್ದಾರೆ ಎಂದು ಹೇಳಿದರು.
ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ಬಿಹಾರದಲ್ಲಿ ಎನ್‍ಡಿಎ ಹಿಂದೆಂದಿಗಿಂತಲೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಅಪಪ್ರಚಾರಕ್ಕೆ ಉತ್ತರ ನೀಡಿದೆ. ಪ್ರಧಾನಿ ಮೋದಿ, ನಾಯಕರಾದ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಅವರ ನಾಯಕತ್ವದಲ್ಲಿ ಒಳ್ಳೆಯ ಫಲಿತಾಂಶ ಬಂದಿದ್ದು, ಕರ್ನಾಟಕದಲ್ಲಿ ಮುಂದೆ ನಡೆಯುವ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಕೆ.ಎನ್.ಸುಬ್ಬಣ್ಣ, ಮುಖಂಡರಾದ ಕಿರಣ್ ಗೌಡ, ಜೋಗಿ ಮಂಜು, ಸಂತೋಷ್ ಕುಮಾರ್, ಮಹೇಶ್‍ರಾಜೇ ಅರಸ್, ಬಿ.ರಂ.ರಘು ಸೇರಿದಂತೆ ಅನೇಕರು ಭಾಗವಹಿಸಿದ್ದರು.

























