ಎತ್ತಿನಬೂದಿಹಾಳದಲ್ಲಿ ಉಚಿತ ಆರೋಗ್ಯ ಶಿಬಿರ – 250ಕ್ಕೂ ಹೆಚ್ಚು ಜನರಿಗೆ ತಪಾಸಣೆ


ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.30:
ಬಳ್ಳಾರಿ ತಾಲೂಕಿನ ಎತ್ತಿನಬೂದಿಹಾಳ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಶಿಬಿರವನ್ನು TVM ಕಾಲೇಜ್ ಆಫ್ ಫಾರ್ಮಸಿ, ಬಳ್ಳಾರಿ, ಮೆಡಿಕಲ್ ಸರ್ವಿಸ್ ಸೆಂಟರ್, ಬಳ್ಳಾರಿ,  ಆಯುಷ್ ಆರೋಗ್ಯ ಕೇಂದ್ರ, ರೂಪನಗುಡಿ ಹಾಗೂ  ಸಮುದಾಯ ಆರೋಗ್ಯ  ಕೇಂದ್ರ, ರೂಪನಗುಡಿ ಇವರ ಸಹಯೋಗದಿಂದ ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರದಲ್ಲಿ 250ಕ್ಕೂ ಹೆಚ್ಚು ರೋಗಿಗಳ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಅವರಲ್ಲಿ 150 ಜನರಲ್ಲಿ ರಕ್ತದೊತ್ತಡ (BP) ಮತ್ತು ಸಕ್ಕರೆ ಕಾಯಿಲೆ (Diabetes) ಇರುವುದನ್ನು ಪತ್ತೆಹಚ್ಚಲಾಗಿದ್ದು ಎಲ್ಲರಿಗೂ ಉಚಿತ ಔಷಧಿ ವಿತರಣೆ ಮಾಡಲಾಯಿತು. ಗ್ರಾಮೀಣ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಶಿಬಿರ ಆಯೋಜನೆ ಮಾಡಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿತು.
ಈ ಕಾರ್ಯಕ್ರಮದಲ್ಲಿ ಡಾ. ಬಿ. ಸೋಮಶೇಖರ್ (ಪ್ರಾಂಶುಪಾಲರು), ಡಾ. ಬಿ.ಆರ್.ಎಸ್. ಗೌಡ, ಡಾ. ಎಚ್.ಎನ್. ನಟರಾಜ್, ಶ್ರೀ ವೀರರೆಡ್ಡಿ ಮತ್ತು ಶ್ರೀಮತಿ ಪ್ರಿಯಾಮಣಿ ಪಾಲ್ಗೊಂಡು ವಿದ್ಯಾರ್ಥಿಗಳ ಸೇವಾ ಮನೋಭಾವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
TVM ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಆರ್.ಎಲ್.ಎನ್. ಮೂರ್ತಿ ಅವರು, “ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆವಂತಾದರೆ, ಸಮಾಜಮುಖಿ ಸೇವೆಗೆ ಅವರು ಸಿದ್ಧರಾಗುತ್ತಾರೆ” ಎಂದು ಅಭಿಪ್ರಾಯಪಟ್ಟರು.
ಅಂತೆಯೇ ಈ ಶಿಬಿರದಲ್ಲಿ ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಪ್ರಾದ್ಯಾಪಕರಾದ ಡಾ. ಪುಷ್ಪಲತಾ, ಡಾ. ದಿವ್ಯ, ಆಯುರ್ವೇದ ವೈದ್ಯ  ಡಾ. ತಿಪ್ಪೇಸ್ವಾಮಿ, ಫಾರ್ಮಸಿ ವಿಭಾಗದ ಐದನೇ ಮತ್ತು ಆರನೇ ವರ್ಷದ ವಿದ್ಯಾರ್ಥಿಗಳು ಹಾಗೂ ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು, ಆರೋಗ್ಯ ಶಿಬಿರವನ್ನು ಯಶಸ್ವಿಗೊಳಿಸಿದರು..