ವಾಷಿಂಗ್ಟನ್,ಸೆ.೨೧- ಭಾರತ ಸೇರಿದಂತೆ ಜಗತ್ತಿನ ವಿವಿಧ ದೇಶಗಳಿಂದ ಅಮೆರಿಕಾಕ್ಕೆ ಬರುವ ಐಟಿ ಉದ್ಯೋಗಿಗಳ ಮೇಲೆ ಗದಾಪ್ರಹಾರ ನಡೆಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ -೧ಬಿ ವೀಸಾ ಅರ್ಜಿದಾರರಿಗೆ ಇಂದಿನಿಂದಲೇ ಅನ್ವಯವಾಗುವಂತೆ ೧ ಲಕ್ಷ ಡಾಲರ್ ಶುಲ್ಕ ಜಾರಿಗೆ ಬರಲಿದೆ.
ಎಚ್-೧ ಬಿ ವೀಸಾಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ ೧ ಲಕ್ಷ ಡಾಲರ್ ಶುಲ್ಕ ಅನ್ವಯವಾಗಲಿದೆ. ಸೆಪ್ಟೆಂಬರ್ ೨೧ಕ್ಕೂ ಮುನ್ನ ಅರ್ಜಿ ಸಲ್ಲಿಸಿದವರಿಗೆ ಈ ನಿಯಮ ಜಾರಿಗೆ ಬರುವುದಿಲ್ಲ ಎಂದು ಅಮೆರಿಕಾ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ ಸ್ಪಷ್ಟಪಡಿಸಿದೆ.
“ಕೆಲವು ವಲಸೆರಹಿತ ಕಾರ್ಮಿಕರ ಪ್ರವೇಶದ ಮೇಲೆ ನಿರ್ಬಂಧ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆ ಸಹಿ ಹಾಕಿದ್ದರು. ಹೀಗಾಗಿ ಹೊಸದಾಗಿ ಎಚ್-೧ ಬಿ ವೀಸಾಕ್ಕಾಗಿ ಅರ್ಜಿ ಸಲ್ಲಿಸುವ ಮಂದಿಗೆ ೧ ಲಕ್ಷ ಡಾಲರ್ ಪಾವತಿ ಮಾಡುವುದು ಕಡ್ಡಾಯವಾಗಿದೆ ಎಂದು ಹೇಳಿದೆ.
ಅಮೆರಿಕಾ ಸರ್ಕಾರದ ಹೊಸ ಆದೇಶ ಎಚ್ ೧- ಬಿ ವೀಸಾ ಕಾರ್ಯಕ್ರಮಕ್ಕೆ ಪ್ರಮುಖ ಪರಿಷ್ಕರಣೆಗೆ ಕಾರಣವಾಗಿದ್ದು ಹೊಸ ಅರ್ಜಿಗಳ ಮೇಲೆ ೧ ಲಕ್ಷ ಡಾಲರ್ ಶುಲ್ಕ ವಿಧಿಸಲಾಗಿದೆ.
ಅನುಮೋದಿಸಲಾದ ೩,೯೯,೩೯೫ ಎಚ್-೧ ಬಿ ವೀಸಾಗಳಲ್ಲಿ ಶೇಕಡಾ ೭೧ ರಷ್ಟು ಭಾರತೀಯರು ವೀಸಾ ಸ್ವೀಕರಿಸಿದ್ದರು. ಚೀನಾ ಕೇವಲ ಶೇಕಡಾ ೧೧.೭ ರಷ್ಟು ಮಾತ್ರ ಪಡೆದಿದೆ. ಕ್ರಮ ಭಾರತಕ್ಕೆ ಹೆಚ್ಚು ಪರಿಣಾಮ ಬೀರುವ ನಿರೀಕ್ಷೆಯಿದೆ. ಹೊಸ ಅರ್ಜಿದಾರರನ್ನು ಮಾತ್ರ ಗುರಿಯಾಗಿಸಿಕೊಂಡಿದೆ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.
“ಈಗಾಗಲೇ ಎಚ್-೧ ಬಿ ವೀಸಾಗಳನ್ನು ಹೊಂದಿರುವವರು ಮತ್ತು ಪ್ರಸ್ತುತ ದೇಶದ ಹೊರಗೆ ಇರುವವರಿಗೆ ಮರುಪ್ರವೇಶಿಸಲು ೧ ಲಕ್ಷ ಶುಲ್ಕ ವಿಧಿಸಲಾಗುತ್ತಿದೆ ಎಂದು ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ.
ಈ ಕುರಿತು ಎಚ್ ೧ಬಿ ವೀಸಾ ಬಯಸುವ ಭಾರತೀಯ ಐಟಿ ಉದ್ಯೋಗಿಗಳಿಗೆ ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತುರ್ತು ಸಹಾಯ ಸಂಖ್ಯೆ ಸಹ ಬಿಡುಗಡೆ ಮಾಡಿದೆ.
ಅಸ್ತಿತ್ವದಲ್ಲಿರುವ ಎಚ್-೧ ವೀಸಾ ಹೊಂದಿರುವವರಿಗೆ ಗಮನಾರ್ಹ ಪರಿಹಾರವಿದೆ ಎಂದು ಅಮೆರಿಕದ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ, ೧೦೦,೦೦೦ ವಾರ್ಷಿಕ ಶುಲ್ಕ ಹೊಸ ಎಚ್-೧ ವೀಸಾ ಅರ್ಜಿಗಳನ್ನು ಗುರಿಯಾಗಿರಿಸಿಕೊಂಡಿದೆ ಎಂದು ತಿಳಿಸಿದೆ.
ಭಾರತ ಅಥವಾ ವಿದೇಶಗಳಿಗೆ ಭೇಟಿ ನೀಡುವವರು ಸೇರಿದಂತೆ ಪ್ರಸ್ತುತ ಎಚ್-೧ ವೀಸಾಗಳನ್ನು ಹೊಂದಿರುವ ವ್ಯಕ್ತಿಗಳು ಅಮೆರಿಕಕ್ಕೆ ಹಿಂತಿರುಗುವ ಅಗತ್ಯವಿಲ್ಲ ಅಥವಾ ೧ ಲಕ್ಷ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ ಎಂದು ಹೇಳಿದೆ.




























