
ಸಂಜೆವಾಣಿ ವಾರ್ತೆ
ಬಳ್ಳಾರಿ, ಜ.11: ಎಐಯುಟಿಯುಸಿ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಜಿಲ್ಲಾ ಕಛೇರಿಯಲ್ಲಿ ‘ಕಾರ್ಮಿಕರ ಅಧ್ಯಯನ ಶಿಬಿರ’ವನ್ನು ಹಮ್ಮಿಕೊಳ್ಳಲಾಗಿತ್ತು. ಗಣಿ, ಸ್ಪಾಂಜ್ ಐರನ್, ಕೆಪಿಟಿಸಿಎಲ್, ಜೆಸ್ಕಾಂ, ಆಶಾ, ಹಾಸ್ಟೆಲ್, ಬಿಸಿಯೂಟ ಸೇರಿದಂತೆ ವಿವಿಧ ವಿಭಾಗಗಳ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಚರ್ಚೆಯನ್ನು ನಡೆಸಿಕೊಟ್ಟ ಎಐಯುಟಿಯುಸಿ ರಾಜ್ಯ ಅಧ್ಯಕ್ಷರಾದ ಕೆ.ಸೋಮಶೇಖರ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರ ಮೇಲೆ ತೀವ್ರತರ ದಾಳಿಯನ್ನು ನಡೆಸುತ್ತಿವೆ. ಕೇಂದ್ರ ಬಿಜೆಪಿ ಸರ್ಕಾರ, ಯಾವುದೇ ರೀತಿಯಲ್ಲಿ ಚರ್ಚೆಗೆ ಅವಕಾಶ ನೀಡದೆ, ಏಕಪಕ್ಷೀಯವಾಗಿ 4 ಲೇಬರ್ ಕೋಡ್‍ಗಳನ್ನ ಜಾರಿಗೆ ತಂದಿದೆ. ಈ ಹಿಂದೆ ಇದ್ದ 29 ಕಾರ್ಮಿಕ ಪರ ಕಾನೂನುಗಳನ್ನು ತಿದ್ದುಪಡಿ ಮಾಡಿ, ಈ ಲೇಬರ್ ಕೋಡ್‍ಗಳನ್ನ ಜಾರಿಗೆ ತಂದಿದೆ. ‘ಇದರಿಂದ ಕಾರ್ಮಿಕರಿಗೆ ಸಾಕಷ್ಟು ಅನುಕೂಲವಾಗುತ್ತದೆ’ ಎಂದು ಬಿಜೆಪಿ ಸರ್ಕಾರ ಮಾಧ್ಯಮಗಳಲ್ಲಿ ಸುಳ್ಳು ಪ್ರಚಾರಗಳನ್ನು ನಡೆಸುತ್ತಿದೆ. ವಾಸ್ತವವಾಗಿ, ಕಾರ್ಮಿಕರನ್ನು ಮತ್ತಷ್ಟು ಶೋಷಿಸಲು, ಲಾಭದಾಹಿ ಕಾರ್ಪೋರೇಟ್ ಮಾಲೀಕರ ಹಿತಕ್ಕಾಗಿ ಈ ಲೇಬರ್ ಕೋಡ್ ಗಳನ್ನು ಜಾರಿಗೆ ತರಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಖಾಯಂ ಉದ್ಯೋಗಗಳು ಸಂಪೂರ್ಣವಾಗಿ ನಾಶವಾಗಲಿವೆ. ಆ ಜಾಗವನ್ನು ‘ನಿಗದಿತ ಅವಧಿಯ ಉದ್ಯೋಗ’ಗಳು (Fixed term employment) ಆಕ್ರಮಿಸಲಿವೆ. ಹೋರಾಟದ ಹಕ್ಕು ಸೇರಿದಂತೆ ಅನೇಕ ಶಾಸನಬದ್ಧ ಹಕ್ಕುಗಳು ನೆಲಸಮಗೊಳ್ಳಲಿವೆ. ಕಾರ್ಮಿಕರು ರಕ್ತ ಹರಿಸಿ, ತ್ಯಾಗ, ಬಲಿದಾನಗಳಿಂದ ಗಳಿಸಿಕೊಂಡ ಈ ಹಕ್ಕುಗಳನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ.” ಎಂದರು.
ಇಂತಹ ಪರಿಸ್ಥಿತಿಯಲ್ಲಿ ಕಾರ್ಮಿಕರು ಇನ್ನಷ್ಟು ಸಂಘಟಿತರಾಗುತ್ತಾ, ಹೋರಾಟದ ಕಣಕ್ಕೆ ಧುಮುಕಬೇಕು. ದೇಶಾದ್ಯಂತ ಕೋಟ್ಯಂತರ ಸಂಖ್ಯೆಯಲ್ಲಿ ಕಾರ್ಮಿಕರು ರಸ್ತೆಗೆ ಇಳಿದು, ಸಮರಶೀಲ ಹೋರಾಟವನ್ನು ಬೆಳಸಬೇಕಿದೆ. ಜಾತಿ, ಧರ್ಮ, ಭಾಷೆ ಹೆಸರಲ್ಲಿ ಕಾರ್ಮಿಕರನ್ನು ಒಡೆಯುವ ಪಿತೂರಿಗಳಿಗೆ ಬಲಿಯಾಗದೆ, ಕಾರ್ಮಿಕರು ತಮ್ಮ ಐಕ್ಯತೆಯನ್ನು ಮತ್ತಷ್ಟು ಗಟ್ಟಿಯಾಗಿಸಬೇಕು. ಈ ಹಿನ್ನೆಲೆಯಲ್ಲಿ, ಫೆಬ್ರವರಿ 12 ರಂದು ಲೇಬರ್ ಕೋಡ್ ಹಾಗೂ ಇನ್ನಿತರ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ನಡೆಯುತ್ತಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸಬೇಕೆಂದು” ಕರೆ ನೀಡಿದರು.
ಈ ಚರ್ಚಾಗೋಷ್ಠಿಯ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷರಾದ ಎ.ದೇವದಾಸ್ ವಹಿಸಿದ್ದರು.
ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್ ‘ವೈಜ್ಞಾನಿಕ ಮನೋಭಾವ ಹಾಗೂ ಮೂಢನಂಬಿಕೆ’ ಕುರಿತು ಚರ್ಚೆ ನಡೆಸಿಕೊಟ್ಟರು.
ಜಿಲ್ಲಾ ಉಪಾಧ್ಯಕ್ಷರಾದ ಸೋಮಶೇಖರ್ ಗೌಡ, ಎ.ಶಾಂತಾ, ಜಂಟಿ ಕಾರ್ಯದರ್ಶಿ ಸುರೇಶ್, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮುಖಂಡರಾದ ಗೀತಾ, ಕಿರಣ್ ಕುಮಾರ್, ಚೇತನ್, ಮುರಳಿ, ಸಂತೋಷ್, ಪಾರ್ವತಮ್ಮ, ರಾಮಕ್ಕ, ಚಿಟ್ಟಮ್ಮ, ಹುಲುಗಪ್ಪ, ದೀಪ, ಮುರಳಿ ಕೃಷ್ಣ, ಚೈತನ್ಯ, ನಾಗಮ್ಮ, ಗೀತ ಸಿರಿಗೇರಿ, ಮಂಜುಳ ಇನ್ನಿತರರು ಭಾಗವಹಿಸಿದ್ದರು.























