ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷಗಾದಿಗೆ ಏರಿದ ದೊಡ್ಡಸ್ವಾಮೇಗೌಡ

ಸಂಜೆವಾಣಿ ನ್ಯೂಸ್
ಮೈಸೂರು.ಡಿ.31:-
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಎಂಸಿಡಿಸಿಸಿ) ಅಧ್ಯಕ್ಷರಾಗಿ ದೊಡ್ಡಸ್ವಾಮೇಗೌಡ, ಉಪಾಧ್ಯಕ್ಷರಾಗಿ ವೈ.ಎನ್.ಜಯರಾಮು ಅವಿರೋಧವಾಗಿ ಆಯ್ಕೆಯಾದರು.


ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಹತ್ತು. ಜಾ.ದಳ-ಬಿಜೆಪಿ ಬೆಂಬಲಿತ ಮೂವರು ಆಯ್ಕೆಯಾಗಿದ್ದರು. ಕಾಂಗ್ರೆಸ್ ಬೆಂಬಲಿತರಾಗಿ ಅರಣ್ಯ, ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷರೂ ಆದ ಶಾಸಕ ಅನಿಲ್ ಚಿಕ್ಕಮಾದು, ಎಂಎಸ್‍ಐಎಲ್ ಅಧ್ಯಕ್ಷರೂ ಆದ ಶಾಸಕ ಸಿ.ಪುಟ್ಟರಂಗಶೆಟ್ಟಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಶಾಸಕ ಆರ್.ನರೇಂದ್ರ, ಕೆ.ಆರ್.ನಗರದ ಶಾಸಕ ಡಿ.ರವಿಶಂಕರ್ ಅವರ ತಂದೆ ದೊಡ್ಡಸ್ವಾಮೇಗೌಡ, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಮಹಾಮಂಡಳ ಅಧ್ಯಕ್ಷ ಎಸ್.ಚಂದ್ರಶೇಖರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಬಂಧಿ ಎಂ.ಕೆಂಚಪ್ಪ ಶಾಸಕ ತನೀರ್ ಸೇರ್ ಆಪ್ತ ಜಿ.ಎನ್.ಮಂಜುನಾಥ್, ವೈ.ಎನ್. ಜಯರಾಮು, ಇ.ಷಿ.ಲೋಕೇಶ್ ಆಯ್ಕೆಯಾಗಿದ್ದರು


ಜಾ.ದಳ-ಬಿಜೆಪಿ ಬೆಂಬಲಿತರಾಗಿ ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ.ಹರೀಶ್ ಗೌಡ, ಮೈಮುಲ್ ನಿರ್ದೇಶಕ ಬಿ.ಎನ್.ಸದಾನಂದ, ತಿ.ನರಸೀಪುರದ ಟಿ.ಪಿ.ಬೋರೇಗೌಡ ಆಯ್ಕೆಯಾಗಿದ್ದರು. ಕಾಂಗ್ರೆಸ್ ಬೆಂಬಲಿತರು ಹತ್ತು ಸ್ಥಾನಗಳನ್ನು ಗೆದ್ದಿರುವ ಕಾರಣ ನಾಮನಿರ್ದೇಶನ ಅಥವಾ ಸರ್ಕಾರದ ಪ್ರತಿನಿಧಿಗಳ ಬೆಂಬಲದ ಅಗತ್ಯವಿಲ್ಲದೆ ಅಧಿಕಾರ ಹಿಡಿದರು.


ಅಪ್ಪನ ಪರ ಮಗನ ಬ್ಯಾಟಿಂಗ್: ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ತಮ್ಮ ತಂದೆ ದೊಡ್ಡಸ್ವಾಮೇಗೌಡರನ್ನು ತಂದುಕೂರಿಸಲು ಕೆ.ಆರ್.ನಗರ ಕ್ಷೇತ್ರದ ಶಾಸಕ ಡಿ.ರವಿಶಂಕರ್ ಅವರು ಸಿಎಂ ಮೊರೆ ಹೋಗಿದ್ದರು. ಹಲವು ವರ್ಷಗಳಿಂದಲೂ ಹಿಂದುಳಿದ ವರ್ಗಕ್ಕೆ ಸೇರಿದವರಿಗೆ ಅಧ್ಯಕ್ಷ ಸ್ಥಾನ ಸಿಗದೆ ಇರುವುದನ್ನು ಮುಂದಿಟ್ಟುಕೊಂಡು ಆಯ್ಕೆ ಮಾಡುವಂತೆ ಮನವೊಲಿಸುವ ಪ್ರಯತ್ನ ನಡೆಸಿದ್ದರು. ಈ ಮಧ್ಯೆ ಒಮ್ಮೆ ಅಧ್ಯಕರಾಗಿದ್ದ ಚಂದ್ರಶೇಖರ್ ಶಾಸಕರಾದ ಕೆ.ಹರೀಶ್ ಗೌಡ, ತನ್ನೀರ್ ಸೇಠ್ ಅಲ್ಲದೆ ಇತರೆ ನಿರ್ದೇಶಕರ ಮನವೊಲಿಸಿ ತಮ್ಮ ಪರವಾದ ಅಭಿಪ್ರಾಯ ವ್ಯಕ್ತಪಡಿಸುವಂತೆ ಹೇಳಿದ್ದರು. ಮತ್ತೊಂದೆಡೆ ಚಾಮರಾಜನಗರ ಜಿಲ್ಲೆಗೆ ಪ್ರಾತಿನಿಧ್ಯದ ಜತೆಗೆ, ತಮ್ಮ ತಂದೆ ಸಹಕಾರ ಸಚಿವರಾಗಿ ಕೆಲಸ ಮಾಡಿರುವ ಕಾರಣ ತಮ್ಮನ್ನು ಆಯ್ಕೆ ಮಾಡಿದರೆ ಉತ್ತಮವೆಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ವರಿಷ್ಠರ ಗಮನಕ್ಕೆ ತಂದಿದ್ದರು.


ಈ ಹಿನ್ನಲೆಯಲ್ಲಿ ಸೋಮವಾರ ರಾತ್ರಿಯೇ ಸಿಎಂ ಸಂದೇಶವನ್ನು ರಾತ್ರಿ ಎಲ್ಲಾ ನಿರ್ದೇಶಕ ಸಭೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದ್ದರು. ಅದರಂತೆ ಮಂಗಳವಾರ ಬೆಳಿಗ್ಗೆ ಶಾಸಕ ಡಿ.ರವಿಶಂಕರ್ ಅವರ ತಂದೆ ದೊಡ್ಡಸ್ವಾಮೇಗೌಡ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಬಳಿಕ ಯಾರು ಸಹ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ 12 ಗಂಟೆಗೆ ಅವರನ್ನೇ ಆವಿರೋಧವಾಗಿ ಚುನಾವಣಾಧಿಕಾರಿಗಳು ಘೋಷಣೆ ಮಾಡಿದರು.ಈ ಹಿನ್ನೆಲೆಯಲ್ಲಿ ಬ್ಯಾಂಕ್ ಎದುರು ಅಭಿಮಾನಿಗಳು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಶಾಸಕರಾದ ಗಣೇಶ್ ಪ್ರಸಾದ್, ಅನಿಲ್ ಚಿಕ್ಕಮಾದು, ಹರೀಶ್ ಗೌಡ, ಪುಟ್ಟಸಿದ್ದಶೆಟ್ಟಿ ಮೊದಲಾದ ಎಲ್ಲಾ ನಿರ್ದೇಶಕರು ಒಗ್ಗಟ್ಟಿನಲ್ಲಿ ಅಧ್ಯಕ್ಷರಿಗೆ ಶುಭ ಕೋರಿದರು.