ಎಂಬಿಪಾಗೆ ಸಿಎಂ ಭಾಗ್ಯ – ಕೋಡಿಶ್ರೀ ಭವಿಷ್ಯ

ಬೆಂಗಳೂರು,ಜು.೨- ರಾಜಕೀಯ ಭವಿಷ್ಯವಾಣಿಗೆ ಹೆಸರುವಾಸಿಯಾಗಿರುವ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲರಿಗೆ ಮುಖ್ಯಮಂತ್ರಿ ಆಗೋ ಯೋಗ ಇದೆ ಎನ್ನುವ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಯ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಬಲಿಗರ ನಡೆಯುತ್ತಿರುವ ಹಗ್ಗ ಜಗ್ಗಾಟದ ನಡುವೆ ಸ್ವಾಮೀಜಿ ಭವಿಷ್ಯ ಕುತೂಹಲ ಕೆರಳಿಸಿದೆ.

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕಡನಿ ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದ್ದಾರೆ

ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬೆನ್ನಲ್ಲೇ ಈ ಹೇಳಿಕೆ ವೈರಲ್ ಆಗಿದೆ. ಸಚಿವ ಎಂಬಿ ಪಾಟೀಲ್ ಅವರು ತುಂಬಾ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಮುಖ್ಯಮಂತ್ರಿ ಆಗುವ ಯೋಗ ಇದೆ. ಉತ್ತರ ಕರ್ನಾಟಕ ಭಾಗದಿಂದ ಎಂ.ಬಿ.ಪಾಟೀಲ್ ಅವರು ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದಾರೆ.

ಈಗಾಗಲೇ ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಡಿಕೆ ಶಿವಕುಮಾರ್, ಜಿ.ಪರಮೇಶ್ವರ್, ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರಿದ್ದು, ಈ ಪೈಕಿ ಎಂಪಿ ಪಾಟೀಲಲ್ ಗೆ ಮುಖ್ಯಮಂತ್ರಿ ಪಟ್ಟ ಎಂದು ಕೋಡಿಶ್ರೀ ಹೇಳಿದ್ದಾರೆ.

ಕಳೆದ ತಿಂಗಳಷ್ಟೇ ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ರಾಜ್ಯ ರಾಜಕಾರಣದ ಸಂಬಂಧ ಸ್ಫೋಟಕ ಭವಿಷ್ಯ ನುಡಿದಿದ್ದರು. ರಾಜ್ಯ ಸರ್ಕಾರಕ್ಕೆ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದಿದ್ದರು. ಇದೀಗ ಒಂದೇ ತಿಂಗಳ ಅಂತರದಲ್ಲಿ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ರಾಜ್ಯದ ಮುಖ್ಯಮಂತ್ರಿ ಆಗುವ ಯೋಗವಿದೆ ಎಂದು ಭವಿಷ್ಯ ನುಡಿದಿದ್ದಾರೆ