
ಸಂಜೆವಾಣಿ ವಾರ್ತೆ
ತಿ.ನರಸೀಪುರ ನ.24– ಧಾರ್ಮಿಕ ಕ್ಷೇತ್ರಗಳ ದರ್ಶನದ ಜೊತೆಗೆ ಸಾಮಾಜಿಕವಾಗಿ ಹಿಂದುಳಿದ ಉಪ್ಪಾರ ಸಮುದಾಯವನ್ನು ಸಂಘಟಿಸಿ, ಜಾಗೃತಿಗೋಳಿಸಲು ಪ್ರವಾಸವನ್ನು ಕೈಗೊಂಡಿದ್ದೇವೆ ಎಂದು ಹೊಸದುರ್ಗ ಶ್ರೀ ಭಗೀರಥ ಪೀಠದ ಜಗದ್ಗುರು ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.
ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯೆ ಪಟ್ಟಣಕ್ಕೆ ಭಾನುವಾರ ಆಗಮಿಸಿ, ಕಬಿನಿ ಅತಿಥಿ ಗೃಹದಲ್ಲಿ ತಾಲೂಕಿನ ಉಪ್ಪಾರ ಸಮುದಾಯದ ಮುಖಂಡರೊಂದಿಗೆ ಸಮಾಲೋಚಿಸಿ ಮಾತನಾಡಿದ ಅವರು ನಾಡಿನಲ್ಲಿ ಉಪ್ಪಾರ ಸಮುದಾಯವನ್ನು ಸಂಘಟಿಸಿ, ಜಾಗೃತಿಗೊಳಿಸುವ ಕಾರ್ಯ ಭಾರವನ್ನು ಚಾಮರಾಜನಗರ ಶಾಸಕ ಸಿ ಪುಟ್ಟರಂಗಶೆಟ್ಟಿ ಹಾಗೂ ಉಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ನಿರ್ವಹಿಸಲಿದ್ದಾರೆ ಎಂದರು.
ಸಮರ್ಪಕವಾಗಿ ಸಿಗದಿರುವ ಮೀಸಲಾತಿ ಹಾಗೂ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಉಪ್ಪಾರ ಸಮುದಾಯ ಸಂಘಟಿತ ಹೋರಾಟವನ್ನು ಮಾಡಬೇಕು. ಸಾಮಾಜಿಕವಾಗಿ ಬದುಕಿನಲ್ಲಿ ಸುಧಾರಣೆ ಕಾಣಲು ಶಿಕ್ಷಣವನ್ನು ಪಡೆಯಬೇಕು.
ರಾಜ್ಯ ಸರ್ಕಾರ ಸಮುದಾಯದ ಸಮಗ್ರ ಅಭಿವೃದ್ಧಿಗೆ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಮತ್ತು ಅಧಿಕಾರವನ್ನು ನೀಡಬೇಕು ಎಂದು ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದರು.
ಶ್ರೀ ಗಳು ಸೇರಿದಂತೆ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಲ ಉಪ್ಪಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾಧ್ಯಕ್ಷ ಕರಲಪುರ ನಾಗರಾಜು, ಜನಕಲ್ಯಾಣ ಟ್ರಸ್ಟ್ ತಾಲೂಕು ಅಧ್ಯಕ್ಷ ಸಿದ್ದಪ್ಪಸ್ವಾಮಿ, ದೊಡ್ಡೇಬಾಗಿಲು ಪಿ ಎ ಸಿ ಸಿ ಎಸ್ ಅಧ್ಯಕ್ಷ ಕೃಷ್ಣಾಪುರ ಮರಿಸ್ವಾಮಿ, ಗ್ರಾ.ಪಂ ಸದಸ್ಯ ಆರ್.ಮಾದೇಶ್, ಮಾಜಿ ಅಧ್ಯಕ್ಷ ಕಾವೇರಿಪುರ ಶಾಂತಕುಮಾರ್, ಮುಖಂಡರಾದ ಕೆಂಪಯ್ಯನಹುಂಡಿ ರಾಜೇಂದ್ರ, ರಾಜಣ್ಣ, ಕನ್ನಳ್ಳಿಮೋಳೆ ಚಿನ್ನಸ್ವಾಮಿ, ಕೊತ್ತೇಗಾಲ ಮಹದೇವ, ಮುಳ್ಳೂರು ನಾಗರಾಜು ಹಾಗೂ ಇತರರು ಇದ್ದರು.


























