
ಸಂಜೆವಾಣಿ ವಾರ್ತೆ
ಹೊಸಪೇಟೆ ಡಿ 2: ಪ್ರಕೃತಿ, ಜೀವ, ಪರಮಾತ್ಮ ತತ್ವಗಳಲ್ಲಿ ಉಪನಿಷತ್ ಮತ್ತು ವಚನಗಳ ಸಾರ ಒಂದೇ, ಅದನ್ನು ಓದಿ ಅರ್ಥೈಸುವ ಪ್ರಯತ್ನ ಮಾಡಿದ್ದೇ ಆದರೆ ಯಾರಲ್ಲಿಯೂ ಯಾವುದೇ ಗೊಂದಲ, ಜಗಳ ಉಂಟಾಗಲು ಸಾಧ್ಯವಿಲ್ಲ ಎಂದು ಕಲ್ಲಹಳ್ಳಿ ಶ್ರೀ ಸತ್ಯಕಾಮ ಪ್ರತಿಷ್ಠಾನದ ಸಂಸ್ಥಾಪಕಿ ವೀಣಾ ಬನ್ನಂಜೆ ಹೇಳಿದರು.
ಗೀತಾ ಜಯಂತಿ ಪ್ರಯುಕ್ತ ಇಲ್ಲಿನ ಶ್ರೀ ರಾಮಕೃಷ್ಣ ಗೀತಾಶ್ರಮದಲ್ಲಿ ಭಾನುವಾರ ಪ್ರವಚನ ನೀಡಿದ ಅವರು, ಮಹಾನ್ ವಚನಕಾರ ಅಲ್ಲಮ ಪ್ರಭು ಅವರ ’ಆಕಾಶದ ಮೇಲೊಂದು ಅಭಿನವ ಗಿಳಿ ಹುಟ್ಟಿ ನವ ಸಂಭ್ರಮದಲ್ಲಿ ಮನೆ ಮಾಡಿತ್ತು, ಒಂದು ಗಿಳಿ ಇಪ್ಪತ್ತೈದು ಗಿಳಿಯಾಯಿತ್ತು. ಬ್ರಹ್ಮನಾಗಿಳಿಗೆ ಪಂಜರವಾದ; ವಿಷ್ಣುವಾಗಿಳಿಗೆ ಕೊರಕೂಳಾದ, ರುದ್ರನಾಗಿಳಿಗೆ ತಾ ಕೋಲಾದ. ಇಂತೀ ಮೂವರ ಮುಂದಣ ಕಂದನ ನುಂಗಿ ದುಷ್ಟನಾಮ ನಷ್ಟವಾಯಿತ್ತು, ಇದೆಂತೋ ಗುಹೇಶ್ವರ ವಚನದಲ್ಲಿ ಪಂಚಭೂತಗಳನ್ನು ಒಳಗೊಂಡಂತೆ 25 ಜೀವತತ್ವಗಳ ಸಂದೇಶ ಇದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದು ಸಹ ಇದನ್ನೇ ಎಂದರು.
ಬೆಂಗಳೂರು ಶ್ರೀ ರಾಮಕೃಷ್ಣ ವಿವೇಕಾನಂದ ವೇದಾಂತಾಶ್ರಮದ ಸ್ವಾಮಿ ಅಭಯಾನಂದಜೀ ಮಹಾರಾಜ್, ಕೊಪ್ಪಳ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಚೈತನ್ಯಾನಂದಜೀ ಮಹಾರಾಜ್, ಹೊಸಪೇಟೆ ರಾಮಕೃಷ್ಣ ಗೀತಾಶ್ರಮದ ಸ್ವಾಮಿ ಸುಮೇಧಾನಂದಜೀ ಮಹಾರಾಜ್, ಅಭಿನವ ಶ್ರೀಕಂಠ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ರಾಮಕೃಷ್ಣ ಗೀತಾಶ್ರಮದಲ್ಲಿ ನಿರ್ಮಿಸಲಿರುವ ವಸತಿ ಸಮುಚ್ಛಯಕ್ಕೆ ತನು, ಮನ, ಧನ ಸಹಾಯ ನೀಡಲು ಸ್ವಾಮೀಜಿಗಳು ಕೋರಿದರು.
ನಗರಸಭೆ ಆಯುಕ್ತ ಎ.ಶಿವಕುಮಾರ್, ಕಂದಾಯ ಅಧಿಕಾರಿ ನಾಘರಾಜ, ಗಣ್ಯರಾದ ಪ್ರೊಫೆಸರ್ ಎಫ್.ಟಿ.ಹಳ್ಳಿಕೇರಿ, ಶ್ರೀಕಾಂತ, ಪ್ರಕಾಶ ಶಾನುಭಾಗ ಇದ್ದರು.
ಬಾಲನಟಿ ಶರ್ವರಿ ಅವರ ಕೃಷ್ಣನ ಏಕಪಾತ್ರಾಭಿನಯ ಮನಸೂರೆಗೊಂಡಿತು.
























