ಉಪನಿಷತ್ ನಲ್ಲಿಯೇ ಕಾಶಿ ಉಲ್ಲೇಖವಿದೆ, ದೇಗುಲದ ಗೋಡೆಗಳ ಮೇಲೆ ಇತಿಹಾಸವಿದೆ: ಡಾ.ಮೀನಾಕ್ಷಿ ಜೈನ್

ಮಂಗಳೂರು ಲಿಟ್ ಫೆಸ್ಟ್ ನಲ್ಲಿ ಕಾಶಿ ಮತ್ತು ಮಥುರಾದ ದೇವಸ್ಥಾನದ ಜಾಗ ವಿವಾದ ಕುರಿತು ಸ್ಪಷ್ಟನೆ ನೀಡಿದ ಖ್ಯಾತ ಇತಿಹಾಸಕಾರ್ತಿ ಮಂಗಳೂರು ಲಿಟ್ ಫೆಸ್ಟ್ ವೇದಿಕೆ, ಮಂಗಳೂರು: ‘ಉಪನಿಷತ್ ನಲ್ಲಿಯೇ ಕಾಶಿಯ ಉಲ್ಲೇಖವಿದೆ, ಕಾಶಿಯ ದೇಗುಲದ ಗೋಡೆಗಳ ಮೇಲೆ ಇತಿಹಾಸವಿದೆ. ಕಾಶಿಯ ಇತಿಹಾಸವನ್ನು ೧೨ನೇ ಶತಮಾನದಿಂದ ಉಲ್ಲೇಖಿಸುವುದು ತಪ್ಪು ಎಂದು ಖ್ಯಾತ ಇತಿಹಾಸಕಾರ್ತಿ ಪದ್ಮಶ್ರೀ ಡಾ.ಮೀನಾಕ್ಷಿ ಜೈನ್ ಹೇಳಿದ್ದಾರೆ. ಈ ಮೂಲಕ ಕಾಶಿ ಹಿಂದೂಗಳಿಗೆ ಸೇರಿದ್ದು ಎಂಬುದನ್ನು ಅವರು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.
೮ನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್ ಪ್ರಶಸ್ತಿ ಸ್ವೀಕರಿಸಿದ ಡಾ.ಮೀನಾಕ್ಷಿ ಜೈನ್ ಅವರು ಬಳಿಕ ಸಂವಾದದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅವರಿಗೆ ಕಾಶಿ ಮತ್ತು ಮಥುರಾದಲ್ಲಿ ದೇವಸ್ಥಾನದ ಜಾಗ ವಿವಾದಕ್ಕೀಡಾಗಿರುವುದರ ಕುರಿತು ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಶಿಯ ಇತಿಹಾಸವನ್ನು ೧೨ನೇ ಶತಮಾನದಿಂದ ಉಲ್ಲೇಖಿಸಲಾಗುತ್ತದೆ. ಅದು ತಪ್ಪು. ಉಪನಿಷತ್ ಕಾಲದಿಂದಲೂ ಕಾಶಿಗೆ ಅಸ್ತಿತ್ವವಿದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅಲ್ಲಿಯ ಇತಿಹಾಸವನ್ನು ದೇವಸ್ಥಾನದ ಗೋಡೆಗಳ ಮೇಲೆಯೇ ಬರೆಯಲಾಗಿದೆ. ಆದರೂ ೧೯೩೬ರಲ್ಲಿ ವ್ಯಕ್ತಿಯೊಬ್ಬರು ಅದು ವಕ್ಫ್ ಗೆ ಸೇರಿದ ಜಾಗವೆಂದು ದಾವೆ ಹೂಡಿದರು. ಬ್ರಿಟಿಷರ ಆಡಳಿತದಲ್ಲೇ ಸಂಪೂರ್ಣವಾಗಿ ತನಿಖೆ ನಡೆಸಲಾಯಿತು. ಅಲ್ಲಿ ೩೫ ನಿವಾಸಿಗಳನ್ನು ಮಾತನಾಡಿಸಿ ಮಾಹಿತಿ ಸಂಗ್ರಹಿಸಲಾಯಿತು. ಸುಮಾರು ನಾಲ್ಕು ಸಾವಿರ ಪುಟಗಳಷ್ಟು ವರದಿಯನ್ನು ಸಲ್ಲಿಸಲಾಗಿದೆ’ ಎಂದು ಹೇಳಿದರು.
ನಂತರ ಮಥುರಾ ಕುರಿತು ಸ್ಪಷ್ಟನೆ ನೀಡಿದ ಅವರು, ‘ಮಥುರಾದಲ್ಲಿ ದೇವಸ್ಥಾನಕ್ಕೆ ಮೀಸಲಾಗಿದ್ದ ೧೩.೩ ಎಕರೆ ಜಮೀನಿನ ಪೈಕಿ ಮೂರು ಎಕರೆ ಪ್ರದೇಶವನ್ನು ೧೯೬೮ರಲ್ಲಿ ರಾಷ್ಟ್ರೀಯ ಪಕ್ಷವೊಂದು ಈದ್ಗಾ ಮೈದಾನಕ್ಕೆ ನೀಡಿದೆ. ಮುಂಚೆ ಈ ಕುರಿತು ಮಾತನಾಡಲು ಅಥವಾ ಬರೆಯುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ೨೦೧೦ಕ್ಕೂ ಮೊದಲು ಭಾರತದ ಇತಿಹಾಸ ಕುರಿತು ಪುಸ್ತಕಗಳನ್ನು ಪ್ರಕಟಿಸುವುದಕ್ಕೆ ಯಾವ ಪ್ರಕಾಶಕರು ಮುಂದೆ ಬರುತ್ತಿರಲಿಲ್ಲ. ಈಗ ನನ್ನ ಪುಸ್ತಕಗಳು ಪ್ರಕಟಗೊಳ್ಳುತ್ತವೆ. ನಾನು ಅಯೋಧ್ಯೆಯಲ್ಲಿ ರಾಮ ಮಂದಿರ ನೋಡುತ್ತೇನೆ ಎಂಬ ನಂಬಿಕೆ ಇರಲಿಲ್ಲ. ಆದರೆ, ೨೦೨೫ರಲ್ಲಿ ಅದು ನಿಜವಾಗಿದೆ’ ಎಂದು ಹೇಳಿದರು.
ನಾಗರೀಕತೆಯ ಜೊತೆಗೆ ಮರುಸಂಪರ್ಕ ಎಂಬ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಲವು ನಾಗರೀಕತೆಗಳು ಕಾಲಾನುಕ್ರಮದಲ್ಲಿ ನಶಿಸಿ ಹೋಗಿವೆ. ಆದರೆ, ನಮ್ಮ ನಾಗರೀಕತೆ ಹಲವು ದಾಳಿಗಳ ನಂತರವೂ ಈಗಲೂ ಜೀವಂತವಾಗಿದೆ ಎಂದರೆ ಅದಕ್ಕೆ ಕಾರಣ, ಜನ ಸಾಮಾನ್ಯರು ಮತ್ತು ಅವರ ನಂಬಿಕೆ’ ಎಂದು ಹೇಳಿದರು.
‘ನಮ್ಮ ನಾಗರೀಕತೆಯ ಮೇಲೆ ಏನೇ ದಾಳಿಗಳು ನಡೆದರೂ, ನಾವು ಶರಣಾಗತರಾಗಲಿಲ್ಲ ಎಂದರೆ ಅದಕ್ಕೆ ಕಾರಣ ನಮ್ಮ ನಂಬಿಕೆಗಳು ಮತ್ತು ಆಚರಣೆಗಳು. ನಾವು ತಾಯಿಯನ್ನು ಪೂಜಿಸುತ್ತಾ ಬಂದಿದ್ದೇವೆ. ಮಧ್ಯ ಪ್ರದೇಶದಲ್ಲಿ ಸಿಕ್ಕ ಸುಮಾರು ೧೧ ಸಾವಿರ ವರ್ಷಗಳ ಹಿಂದಿನ ಶಾಸನದಲ್ಲೂ ಇದರ ಉಲ್ಲೇಖವಿದೆ. ಈಗಲೂ ಅದು ಮುಂದುವರೆದಿದೆ. ನಾವು ನಮ್ಮ ನಂಬಿಕೆಯನ್ನು ಬಿಟ್ಟಿಲ್ಲ. ಆ ನಂಬಿಕೆಯನ್ನು ಪಾಲಿಸಿಕೊಂಡು ಬಂದವರು ಜನ ಸಾಮಾನ್ಯರು’ ಎಂದು ಹೇಳಿದರು.
ಎಲ್ಲಾ ಧರ್ಮದವರು ಸೌಹಾರ್ದಯುತವಾಗಿ ಬಾಳಿದ ದೇಶ ನಮ್ಮದು ಈ ಕುರಿತು ವಿವರಣೆ ನೀಡಿದ ಅವರು, ‘ಹಿಂದಿನ ಕಾಲದಲ್ಲಿ ರಾಜರಿಗಿಂತ ಜನ ಸಾಮಾನ್ಯರು ಬಹಳ ಮಹತ್ವದ ಪಾತ್ರ ವಹಿಸುತ್ತಿದ್ದರು. ನಮ್ಮ ನಾಗರಿಕತೆಯನ್ನು ಕಟ್ಟಿದ್ದು ಬರೀ ರಾಜರಲ್ಲ, ಜನಸಾಮಾನ್ಯರ ಪಾಲು ಬಹಳ ದೊಡ್ಡದಿದೆ. ಸಂಚಿಯಲ್ಲಿ ಕೆಲವು ವರ್ಷಗಳ ಹಿಂದೆ ೬೦೧ ಶಾಸನಗಳು ಸಿಕ್ಕಿವೆ. ಅಲ್ಲಿರುವ ಸ್ತಂಭಗಳ ಪೈಕಿ, ಮೂರನ್ನು ಮಾತ್ರ ರಾಜರು ದಾನ ಮಾಡಿದ್ದಾರೆ. ಮಿಕ್ಕಂತೆ ಎಲ್ಲವನ್ನೂ ಜನ ಸಾಮಾನ್ಯರು ದಾನ ಮಾಡಿದ್ದಾರೆ. ಮರಗೆಲಸ ಮಾಡುವವರು, ಬಂಡಿ ಎಳೆಯುವವರು ತಮ್ಮ ಶಕ್ತ್ಯಾನುಸಾರ ದಾನ ಮಾಡಿದ್ದಾರೆ. ಅದನ್ನು ಶಾಸನಗಳಲ್ಲೇ ನಮೂದಿಸಲಾಗಿದೆ. ಬರೀ ಗಂಡಸರಷ್ಟೇ ಅಲ್ಲ, ಮಹಿಳೆಯರು ಸಹ ಪ್ರಮುಖ ಪಾತ್ರ ವಹಿಸುತ್ತಿದ್ದರು. ಆದರೆ, ನಮ್ಮಲ್ಲಿ ಯಾವಾಗಲೂ ಬೇರೆಬೇರೆ ವರ್ಗಗಳ ಜನರ ನಡುವೆ ಕಿತ್ತಾಟಗಳು ನಡೆಯುತ್ತಿದ್ದವು, ನಾವು ಯಾವಾಗಲೂ ಹೊಡೆದಾಡಿಕೊಳ್ಳುತ್ತಿದ್ದೆವು ಎಂಬುದನ್ನು ಪಠ್ಯಗಳಲ್ಲಿ ಹೇಳಿಕೊಡಲಾಗಿದೆ. ತಲೆತಲಾಂತರಗಳಿಂದ ಹಿಂದೂಗಳು, ಜೈನರು ಮತ್ತು ಬೌದ್ಧರ ನಡುವೆ ಆಂತರಿಕ ಕಚ್ಚಾಟಗಳು ನಡೆಯುತ್ತಿದ್ದವು ಎಂದು ಹೇಳಿಕೊಡಲಾಗಿದೆ. ನಮ್ಮನ್ನು ಒಡೆದು ಆಳಲು ಬ್ರಿಟಿಷರು ಮಾಡಿದ ಹುನ್ನಾರ ಇದು. ಆದರೆ ಅದು ಸುಳ್ಳು. ಎಲ್ಲಾ ಧರ್ಮದವರು ಸೌಹಾರ್ದಯುತರಾಗಿ ಬಾಳಿದ ದೇಶ ನಮ್ಮದು. ಭಾರತದ ಇತಿಹಾಸವನ್ನು ಭಾರತೀಯರ ಕಣ್ಣುಗಳಲ್ಲಿ ನೋಡಬೇಕೇ ಹೊರತು, ವಿದೇಶಿಗರ ಕಣ್ಣುಗಳಿಂದ ಅಲ್ಲ ಎಂದರು.
ಡಾ. ಮೀನಾಕ್ಷಿ ಜೈನ್ ಅವರ ಸಂವಾದವನ್ನು ಪೃಥ್ವಿ ಕರಿಂಜೆ ನಡೆಸಿಕೊಟ್ಟರು. ಅದಕ್ಕೂ ಮೊದಲು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿಯೂ ಡಾ.ಮೀನಾಕ್ಷಿ ಜೈನ್ ಉತ್ಸಾಹದಿಂದ ಭಾಗವಹಿಸಿ ಸರಸ್ವತಿ ರಥವನ್ನು ಎಳೆದರು.