
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.31: ತಾಲ್ಲೂಕಿನ ಬೂಕನಕೆರೆ ಹೋಬಳಿ ಗಂಜೀಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕುರುಬಹಳ್ಳಿ ಹಾಗೂ ಪೂವನಹಳ್ಳಿ ಗ್ರಾಮದಲ್ಲಿ ದಿನಸಿ ಉಪ ಕೇಂದ್ರವನ್ನು ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಬಹಳ ವರ್ಷಗಳಿಂದ ಈ ಎರಡೂ ಗ್ರಾಮಗಳ ಜನರು ಮಳೆ, ಚಳಿ, ಗಾಳಿ ಎನ್ನದೇ ದೂರದ ಊರಾದ ಗಂಜಿಗೆರೆ ಗ್ರಾಮಕ್ಕೆ ಆಗಮಿಸಿ ಸೊಸೈಟಿಯಲ್ಲಿ ನೀಡುವ ಅಕ್ಕಿ, ಸೀಮೆಎಣ್ಣೆ, ಗೋಧಿ, ರಾಗಿ ತೆಗೆದುಕೊಂಡು ಹೋಗಲು ಕಷ್ಠಪಡಬೇಕಾಗಿತ್ತು. ಗಂಜೀಗೆರೆ ಸೊಸೈಟಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಮ್ಮ ಪಕ್ಷದ ಮುಖಂಡರು ಹಾಗೂ ಸೊಸೈಟಿ ಅಧ್ಯಕ್ಷರಾದ ನಾಗೇಶ್ ಅವರು ನಾನು ಶಾಸಕನಾದ ನಂತರ ಅನೇಕ ಬಾರಿ ನಮ್ಮ ಸೊಸೈಟಿ ವ್ಯಾಪ್ತಿಗೆ ಬರುವ ಈ ಎರಡು ಗ್ರಾಮಗಳಿಗೆ ಉಪ ಕೇಂದ್ರಗಳ ಅವಶ್ಯಕತೆ ಇದೆ ಎಂದು ಹಲವು ಬಾರಿ ಮಾಹಿತಿ ನೀಡಿ ಮನವಿ ಮಾಡುತ್ತಿದ್ದರು. ಇದಕ್ಕೆ ಸ್ಪಂದಿಸಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ತಾಲ್ಲೂಕು ದಂಡಾಧಿಕಾರಿಗಳ ಜೊತೆಗೆ ಚರ್ಚಿಸಿ ಕೊನೆಗೆ ಈ ಭಾಗದ ಜನರಿಗೆ ಅನುಕೂಲವಾಗುವಂತೆ ಉಪಕೇಂದ್ರವನ್ನು ಸ್ಥಳೀಯ ಆಡಳಿತ ಮಂಡಳಿ, ಗ್ರಾಮದ ಮುಖಂಡರು ಜೊತೆಗೆ ಉದ್ಘಾಟಿಸಿದ್ದೇನೆ. ಸಹಕಾರ ಸಂಘಗಳು ಪಕ್ಷ ರಾಜಕಾರಣದಿಂದ ದೂರವಿದ್ದು ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಈ ಭಾಗದ ಜನತೆ ತಮಗೆ ಸಿಕ್ಕಿರುವ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಗಂಜೀಗೆರೆ ಸೊಸೈಟಿ ಅಧ್ಯಕ್ಷ ಕುರುಬಹಳ್ಳಿ ನಾಗೇಶ್, ತಹಶಿಲ್ದಾರ್ ಡಾ.ಎಸ್.ಯು.ಅಶೋಕ್, ಜಿ.ಪಂ.ಮಾಜಿ ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ, ಗ್ರಾಮ ಪಂಚಾಯತಿ ಅಧ್ಯಕ್ಷ ಮುದುಗೆರೆ ಪರಮೇಶ್, ಸುಧಾಶಿವರಾಜು, ಪರಮೇಶ್, ಆನಂದ್, ಧನಂಜಯ್ ಸೇರಿದಂತೆ ಹಲವು ಗ್ರಾಮಸ್ಥರು ಹಾಜರಿದ್ದರು.